ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಸಂಕಲ್ಪದ ಅಡಿಯಲ್ಲಿ ಭಾರತವು 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿ ಹೊಂದಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ನವದೆಹಲಿಯ ಭಾರತ್ ಮಂಟಪದಲ್ಲಿ ಮುಂದಿನ ಎಪ್ರಿಲ್ ನಲ್ಲಿ ನಡೆಯಲಿರುವ ಭಾರತ್ ಸ್ಟೀಲ್ 2026 ಅಂತಾರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರದರ್ಶನದ ಭಾಗವಾಗಿ ನವದೆಹಲಿಯಲ್ಲಿ ಗುರುವಾರ ಪಾಲುದಾರ ರಾಷ್ಟ್ರಗಳ ರಾಯಭಾರಿಗಳು ಹಾಗೂ ಪ್ರತಿನಿಧಿಗಳ ಜತೆ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 2047ರ ವೇಳೆಗೆ ವಾರ್ಷಿಕ 500 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಬೃಹತ್ ಗುರಿ ಹೊಂದಲಾಗಿದೆ. ಈ ಗುರಿ ಸಾಕಾರಕ್ಕಾಗಿ ಭಾರತವನ್ನು ಜಾಗತಿಕ ಉಕ್ಕು ಸರಪಳಿಯೊಂದಿಗೆ ದೃಢವಾಗಿ ಸಂಯೋಜನೆ ಮಾಡಲಾಗುತ್ತದೆ ಹಾಗೂ ಜಾಗತಿಕ ಸಹಯೋಗಕ್ಕೆ ಹೊಸ ಮಾರ್ಗಗಳನ್ನು ತೆರೆಯಲು ಮತ್ತಷ್ಟು ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಜಾಗತಿಕ ಮಟ್ಟದ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಉತ್ಪಾನೆ ಉತ್ತೇಜಿಸಲು ಭಾರತವು ವಿಶ್ವಾಸಾರ್ಹ ಅಂತಾರಾಷ್ಟ್ರೀಯ ಪಾಲುದಾರಿಕೆಗಳ ಮೇಲೆ ಹೆಚ್ಚು ಪ್ರಾಮುಖ್ಯತೆ ಕೇಂದ್ರೀಕರಿಸುತ್ತದೆ. ಭಾರತದ ಉಕ್ಕು ವಲಯವು ಇಂದು ದೇಶದ ವಿಶಾಲ ಆರ್ಥಿಕ ಪರಿವರ್ತನೆಯನ್ನು ಪ್ರತಿಬಿಂಬಿಸುತ್ತದೆ ಹಾಗೂ ಬೆಳವಣಿಗೆ, ಸ್ಥಿತಿಸ್ಥಾಪಕತ್ವ ಮತ್ತು ಜಾಗತಿಕ ಒಗ್ಗೂಡುವಿಕೆಯ ಆಧಾರಸ್ತಂಭವಾಗಿ ಹೊರಹೊಮ್ಮಿದೆ ಎಂದು ಒತ್ತಿ ಹೇಳಿದರು.
ಭಾರತವು ಪ್ರಸ್ತುತ ಜಗತ್ತಿನ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ ರಾಷ್ಟ್ರವಾಗಿದೆ. ನಿರಂತರ ಸುಧಾರಣೆಗಳು, ಸ್ಥಿರ ಹೂಡಿಕೆಗಳು ಮತ್ತು ಆಧುನೀಕರಣ, ಸ್ವಾವಲಂಬನೆ ಮತ್ತು ಸುಸ್ಥಿರತೆಯ ಮೇಲೆ ಕೇಂದ್ರೀಕರಿಸಿದ ಸ್ಪಷ್ಟ ದೀರ್ಘಕಾಲೀನ ದೃಷ್ಟಿಕೋನದ ಮೂಲಕ ಈ ಸ್ಥಾನವನ್ನು ಸಾಧಿಸಿದೆ ಎಂದರು.
ಉಕ್ಕು ವಲಯವು ಭಾರತದ ಜಿಡಿಪಿಗೆ ಸುಮಾರು 2.5 ಪ್ರತಿಶತದಷ್ಟು ಕೊಡುಗೆ ನೀಡುತ್ತಿದೆ ಮತ್ತು ಸುಮಾರು 2.8 ದಶಲಕ್ಷ ಜನರಿಗೆ ಉದ್ಯೋಗ ಒದಗಿಸಿದೆ. ಮೂಲಸೌಕರ್ಯ ವಿಸ್ತರಣೆ, ಉತ್ಪಾದನಾ ಬೆಳವಣಿಗೆ ಮತ್ತು ರಕ್ಷಣೆ, ಚಲನಶೀಲತೆಯಂತಹ ವಲಯಗಳಿಂದ ಹೆಚ್ಚೆಚ್ಚು ಬೇಡಿಕೆಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಉಕ್ಕು ಸಚಿವಾಲಯದ ಭಾರತ್ ಸ್ಟೀಲ್ ಶೀರ್ಷಿಕೆಯ ಅಂತರರಾಷ್ಟ್ರೀಯ ಸಮ್ಮೇಳನ ಮತ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. ಮೊದಲ ಆವೃತ್ತಿಯಾದ ಭಾರತ್ ಸ್ಟೀಲ್ ಏಪ್ರಿಲ್ 2026 ರಲ್ಲಿ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಭಾರತ್ ಸ್ಟೀಲ್ 2026 ಅನ್ನು ಪ್ರಪಂಚದಾದ್ಯಂತ ಇರುವ ನೀತಿ ನಿರೂಪಕರು, ಉದ್ಯಮಿಗಳು, ಹೂಡಿಕೆದಾರರು, ತಂತ್ರಜ್ಞಾನ ಪೂರೈಕೆದಾರರು ಮತ್ತು ಖರೀದಿದಾರರನ್ನು ಒಟ್ಟುಗೂಡಿಸುವ ಜಾಗತಿಕ ವೇದಿಕೆಯಾಗಲಿದೆ. ಉಕ್ಕು ಬಳಕೆಯನ್ನು ವಿಸ್ತರಿಸುವುದು, ಸುಸ್ಥಿರತೆ ಮತ್ತು ಆರ್ಥಿಕತೆಯನ್ನು ಉತ್ತೇಜಿಸುವುದು, ಕಚ್ಚಾವಸ್ತುಗಳ ಪೂರೈಕೆ ಸರಪಳಿಗಳನ್ನು ಸುರಕ್ಷಿತಗೊಳಿಸುವುದು, ತಾಂತ್ರಿಕ ನಾವೀನ್ಯತೆಯನ್ನು ವೇಗಗೊಳಿಸುವುದು ಮತ್ತು ಸಾಮರ್ಥ್ಯ ವಿಸ್ತರಣೆಗಾಗಿ ಹೂಡಿಕೆಗಳನ್ನು ಸಕ್ರಿಯಗೊಳಿಸುವುದು ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ ಸೇರಿದಂತೆ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.














