ಬೆಂಗಳೂರು: ಫ್ರೀಡಂ ಪಾರ್ಕ್ ನಲ್ಲಿ ಸಮತಾ ಸ್ವಾಭಿಮಾನ ದಳದ ವತಿಯಿಂದ ಅಲ್ಪಸಂಖ್ಯಾತ ನಿರ್ದೇಶನಾಲಯದಲ್ಲಿ ನಡೆದಿರುವ ಭ್ರಷ್ಟಚಾರ ಮತ್ತು ಪರಿಶಿಷ್ಷ ಜಾತಿ ಅಧಿಕಾರಿಗಳ ಮೇಲೆ ಹೇರುವ ಒತ್ತಡ ಹಾಗೂ ಮಾನಸಿಕ ಹಿಂಸೆ ನೀಡುತ್ತಿರುವುದರ ವಿರುದ್ಧ ಪ್ರತಿಭಟನೆ ನಡೆಯಿತು.
ರಾಜ್ಯಾಧ್ಯಕ್ಷ ಡಾ. ಕೆ. ಅರುಣ್ ಕುಮಾರ್ ನೇತೃತ್ವದಲ್ಲಿ ನೂರಾರು ದಲಿತ ಮುಖಂಡರುಗಳು ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ ಮಾಹಿತಿ ಹಕ್ಕು ಅರ್ಜಿಗಳ ರಕ್ಷಣೆಗೆ ಹಾಗೂ ಸಿಬಿಐ ತನಿಖೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಾ ಅರುಣ್ ಕುಮಾರ್ ಕೆ.ಮಾತನಾಡಿ, ಅಲ್ಪಸಂಖ್ಯಾತ ನಿರ್ದೇಶನಾಲಯದಲ್ಲಿ ಎಸ್.ಸಿ/ಎಸ್.ಟಿ. ಸಮುದಾಯದ ಅಧಿಕಾರಿಗಳ ಮೇಲೆ ವಿನಾಕಾರಣ ಭ್ರಷ್ಟಚಾರ, ಇಲಾಖೆ ವಿಚಾರಣೆ ನಡೆಸಲಾಗುತ್ತಿದೆ. ನೊಂದ ಅಧಿಕಾರಿಗಳಿಗೆ ನ್ಯಾಯ ಸಿಗುತ್ತಿಲ್ಲ, ಅಲ್ಪಸಂಖ್ಯಾತ ನಿರ್ದೇಶನಾಲಯ ಇಲಾಖೆಯಲ್ಲಿ ಕೋಟ್ಯಾಂತರ ಅನುದಾನ ಬಿಡುಗಡೆಯಾಗುತ್ತದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಅಭಿವೃದ್ಧಿ ಮಾಡದೇ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಪ್ರಥಮ ಚಿಕಿತ್ಸಾ ಕಿಟ್ ಖರೀದಿ , ಆಹಾರ ಟೆಂಡರ್, ಪೌಷ್ಟಿಕಾಂಶದ ಪುಡಿ, ಕರಾಟೆ ಡ್ರೆಸ್, ಅಲೆಮಾರಿ ಬಂಧು ಪೇಪರ್ ಖರೀದಿ, ಬಯೋಮೆಟ್ರಿಕ್ , ಆನ್ ಲೈನ್ ತರಗತಿ, ಅಧ್ಯಯನ ಸಾಮಾಗ್ರಿ, ಉನ್ನತ ಪರೀಕ್ಷೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಹಾಯಧನ, ಮುಂಬಡ್ತಿ ಸೇರಿದಂತೆ ನಮ್ಮ ಒಟ್ಟಾರೆ 21 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿಗಳ ಮೇಲೆ ಒತ್ತಡ ಮತ್ತು ವಿನಾಕಾರಣ ಶಿಸ್ತು ಕ್ರಮ ಹಿಂಪಡೆಯಬೇಕು. ಅನುದಾನದ ಸಮರ್ಪಕ ಬಳಕೆಯಾಗಬೇಕು, ಮಾಹಿತಿ ಹಕ್ಕು ಕಾಯ್ಡೆ ಅಡಿ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ಸದ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಿದ್ದಾರೆ. ಆದರೆ ನಮಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು ಎಂದು ಹೇಳಿದರು.













