ಬೆಂಗಳೂರು: ಬೆಳ್ಳಂದೂರು ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಕಳೆದ ತಿಂಗಳು ನಿರ್ವಹಣಾ ಕಾರ್ಯದ ವೇಳೆ ಇಬ್ಬರು ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಘಟನೆಯ ಎಲ್ಲ ಆಯಾಮಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷೆ ಡಾ. ಎನ್. ಮಂಜುಳಾ ತಿಳಿಸಿದರು.
ಜಲಮಂಡಳಿ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಸ್‌ಟಿಪಿ ನಿರ್ವಹಣೆಯಲ್ಲಿ ಸುರಕ್ಷತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಹೇಳಿದರು.
ಪ್ರಸ್ತುತ ಜಲಮಂಡಳಿಯ ಎಲ್ಲಾ ಎಸ್‌ಟಿಪಿಗಳಲ್ಲಿ ನಿಗದಿತ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲಾಗುತ್ತಿದ್ದು, ನಿರ್ವಹಣಾ ಕಾರ್ಯಗಳ ನಿಯಮಿತ ಮೇಲ್ವಿಚಾರಣೆ ನಡೆಯುತ್ತಿದೆ. ಆದಾಗ್ಯೂ, ಕಾರ್ಮಿಕರ ಸುರಕ್ಷತೆಗೆ ಯಾವುದೇ ರೀತಿಯ ರಾಜಿ ಇಲ್ಲದಂತೆ ಕಾರ್ಯನಿರ್ವಹಿಸುವುದು ಜಲಮಂಡಳಿಯ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು.
ಎಸ್‌ಟಿಪಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸುರಕ್ಷತಾ ಕ್ರಮಗಳು, ಯಂತ್ರೋಪಕರಣಗಳ ಬಳಕೆ, ತುರ್ತು ಪರಿಸ್ಥಿತಿ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಕೌಶಲ್ಯಾಭಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಬೆಂಗಳೂರಿಗೆ ಕುಡಿಯುವ ನೀರಿನ ಕೊರತೆ ಇಲ್ಲ:
ನಗರದ ನೀರು ಪೂರೈಕೆ ಕುರಿತು ಪ್ರತಿಕ್ರಿಯಿಸಿದ ಡಾ. ಮಂಜುಳಾ, ಸದ್ಯ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಕೊರತೆಯ ಯಾವುದೇ ಪರಿಸ್ಥಿತಿ ಇಲ್ಲ. ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಲ್ಲಿ ಸಮರ್ಪಕ ಪ್ರಮಾಣದ ನೀರು ಲಭ್ಯವಿದ್ದು, ನಗರಕ್ಕೆ ಅಗತ್ಯವಿರುವ ನೀರು ನಿರಂತರವಾಗಿ ಪೂರೈಕೆಯಾಗುತ್ತಿದೆ. ಮುಂಗಾರು ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪರ್ಯಾಯ ವ್ಯವಸ್ಥೆ ಸಿದ್ಧ:
ನಗರದ ಅಗತ್ಯವಿರುವ ಪ್ರದೇಶಗಳಲ್ಲಿ ಸಂಚಾರಿ ಕಾವೇರಿ ಟ್ಯಾಂಕರ್‌ಗಳು ಹಾಗೂ ಕೊಳವೆಬಾವಿಗಳ ಮೂಲಕ ಪರ್ಯಾಯ ನೀರು ಪೂರೈಕೆಯ ವ್ಯವಸ್ಥೆಯನ್ನೂ ಸಿದ್ಧವಾಗಿರಿಸಲಾಗಿದೆ. ಬೆಂಗಳೂರು ನಗರಕ್ಕೆ ಪ್ರತಿ ತಿಂಗಳು ಸರಾಸರಿ 2 ರಿಂದ 2.3 ಟಿಎಂಸಿ ಕಾವೇರಿ ನೀರಿನ ಅಗತ್ಯವಿದ್ದು, ಈ ಕುರಿತು ಸಂಬಂಧಿತ ಇಲಾಖೆಗಳೊಂದಿಗೆ ಅಗತ್ಯ ಸಮನ್ವಯ ನಡೆಸಲಾಗಿದೆ ಎಂದು ಹೇಳಿದರು.
ಕಾರ್ಮಿಕರ ಸುರಕ್ಷತೆಗೆ ಅತ್ಯುನ್ನತ ಆದ್ಯತೆ:
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು ಮಾತನಾಡಿ, ಜಲಮಂಡಳಿಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಸ್ವಚ್ಛತಾ ಕಾರ್ಮಿಕರ ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣಕ್ಕೆ ಅತ್ಯುನ್ನತ ಆದ್ಯತೆ ನೀಡಬೇಕು. ಕಾರ್ಮಿಕರಿಗೆ ಆರೋಗ್ಯ ವಿಮೆ, ಸುರಕ್ಷತಾ ಉಪಕರಣಗಳು, ಕೌಶಲ್ಯ ತರಬೇತಿ, ಸೇವಾ ಭದ್ರತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಜಲಮಂಡಳಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಜೊತೆಗೆ, ಕಾರ್ಮಿಕರ ಕಲ್ಯಾಣಕ್ಕಾಗಿ ಜಾರಿಯಲ್ಲಿರುವ ಅನ್ನಪೂರ್ಣ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ವಿಸ್ತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸ್ವಚ್ಛತಾ ಸಿಬ್ಬಂದಿಗಳೊಂದಿಗೆ ಸಂವಾದ:
ಇದಕ್ಕೂ ಮುನ್ನ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು ಹಾಗೂ ಜಲಮಂಡಳಿ ಅಧ್ಯಕ್ಷೆ ಡಾ. ಎನ್. ಮಂಜುಳಾ ಜಲಮಂಡಳಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿ ಹಾಗೂ ಎಸ್‌ಟಿಪಿ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳು ಮತ್ತು ಸಲಹೆಗಳನ್ನು ಆಲಿಸಿದರು. ನಂತರ ಜಲಮಂಡಳಿಯ ವಿವಿಧ ಯೋಜನೆಗಳು, ಎಸ್‌ಟಿಪಿಗಳ ಕಾರ್ಯನಿರ್ವಹಣೆ ಹಾಗೂ ಕಾರ್ಮಿಕರ ಸುರಕ್ಷತೆಗಾಗಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ. ಶಂಕರ್ ಅಂಕನಶೆಟ್ಟಿಪುರ, ಕಾರ್ಯದರ್ಶಿ ಸುಮಯಾನ ರೂಹಿ, ಜಲಮಂಡಳಿಯ ಪ್ರಧಾನ ಮುಖ್ಯ ಅಭಿಯಂತರ ದಲಾಯತ್, ಆರ್ಥಿಕ ಸಲಹೆಗಾರ ಸುಬ್ಬರಾಮಯ್ಯ, ಮುಖ್ಯ ಅಭಿಯಂತರರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.













