ಬೆಂಗಳೂರು: ಚಿಕ್ಕಪೇಟೆ ವಿಭಾಗದ ಗಾಂಧಿಬಜಾರ್ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಜಿಬಿಎ ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೊಳನ್ ತಿಳಿಸಿದರು.
ಬುಧವಾರ ಚಿಕ್ಕಪೇಟೆ ವಿಭಾಗದ ಗಾಂಧಿ ಬಜಾರ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲು ಆಯುಕ್ತ ರಾಜೇಂದ್ರ ಚೊಳನ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಚಿಕ್ಕಪೇಟೆ ಕಾರ್ಯಪಾಲಕ ಅಭಿಯಂತರ ಪ್ರದೀಪ್ ಕುಮಾರ್ ನೇತೃತ್ವದ ತಂಡ ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸಿತು.
ಈ ಕುರಿತು ಮಾತನಾಡಿರುವ ರಾಜೇಂದ್ರ ಚೊಳನ್ ಗಾಂಧಿ ಬಜಾರ್ ನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸುಮಾರು 120 ಮಳಿಗೆಗಳಿಗೆ ಸ್ಥಳ ಗುರುತಿಸಿ ಆ ಸ್ಥಳದಲ್ಲಿಯೇ ವ್ಯಾಪಾರ ಮಾಡಲು ಸೂಚನೆ ನೀಡಲಾಗಿತ್ತು. ಆದರೆ ನಿಗದಿಪಡಿಸಿರುವ ಸ್ಥಳ ಬಿಟ್ಟು ಹೆಚ್ಚುವರಿ ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದು, ಇದರಿಂದ ಪಾದಚಾರಿಗಳಿಗೆ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಒತ್ತುವರಿ ತೆರವುಗೊಳಿಸಲು ಸಾಕಷ್ಟು ಬಾರಿ ತಿಳಿಸಿದ್ದರೂ ತೆರವುಗೊಳಿಸಿರಲಿಲ್ಲ. ಈ ನಿಟ್ಟಿನಲ್ಲಿ ಇಂದು ಪಾದಚಾರಿ ಮಾರ್ಗ ತೆರವು ಕಾರ್ಯ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ತೆರವು ಕಾರ್ಯಾಚರಣೆಯ ವೇಳೆ 2 ಜೆಸಿಬಿ, 7 ಟ್ರ್ಯಾಕ್ಟರ್ ಗಳು, 3 ಲಾರಿಗಳು ಹಾಗೂ 40 ಸಿಬ್ಬಂದಿಗಳನ್ನು ಬಳಸಿಕೊಂಡು, ನಿಗದಿಪಡಿಸಿರುವ ಜಾಗಕ್ಕಿಂತ ಹೆಚ್ಚುವರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಜಾಗ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದ 5 ಶಾಪ್ ಗಳನ್ನು ತೆರವುಗೊಳಿಸಲಾಗಿದೆ. ಇನ್ನು ಮುಂದೆ ಬೀದಿ ಬದಿ ವ್ಯಾಪಾರಿಗಳಿಗೆ ನಿಗದಿಪಡಿಸಿರುವ ಜಾಗದಲ್ಲಿಯೇ ವ್ಯಾಪಾರ ಮಾಡಬೇಕು. ಅದನ್ನು ಹೊರತುಪಡಿಸಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
ಕಾರ್ಯಾಚರಣೆಯಲ್ಲಿ ಕಾರ್ಯಪಾಲಕ ಅಭಿಯಂತರ ಪ್ರದೀಪ್ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರುಗಳಾದ ಕೃಷ್ಣಕುಮಾರ್, ರಾಮೇಗೌಡ, ಮಾರ್ಷಲ್ ಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.















