ಬೆಂಗಳೂರು: ಬಿಜೆಪಿಯವರು ರಾಜ್ಯಕ್ಕೆ ಎಷ್ಟೇ ಅನ್ಯಾಯವಾದರೂ ಕೇಂದ್ರ ಸರ್ಕಾರ ಮಾಡಿದ್ದನ್ನೆಲ್ಲಾ ಸಮರ್ಥಿಸಿಕೊಳ್ಳುವುದು ಮಹಾ ತಪ್ಪು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶನಿವಾರ ರೇಸ್ ಕೋರ್ಸ್ ರಸ್ತೆಯ ಕೆಇಬಿ ಇಂಜಿನಿಯರ್ ಅಸೋಸಿಯೇಷನ್ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿ ಕರ್ನಾಟಕಕ್ಕೆ ಅನ್ಯಾಯವಾದದ್ದನೆಲ್ಲ ನ್ಯಾಯ ಎನ್ನುವುದು ಮಹಾ ಅಪರಾಧ ಎಂದರು.
ಉದ್ಯೋಗ ಖಾತ್ರಿ ಯೋಜನೆಯ ಚರ್ಚೆಗೆ ಸಿದ್ಧ:
ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆ ಕುರಿತಂತೆ ಚರ್ಚೆಗೆ ಆಹ್ವಾನಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಚರ್ಚೆಗೆ ನಾವು ಸಿದ್ಧವಾಗಿದ್ದು, ದೊಡ್ಡ ಆಂದೋಲನವನ್ನೇ ಮಾಡುತ್ತೇವೆ. ಹೆಚ್. ಡಿ. ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಬಿಜೆಪಿ ಜೆಡಿಎಸ್ ಕೇವಲ ಸುಳ್ಳು ಹೇಳುತ್ತಾರೆ ಎಂದರು.
ಗಡಿ ಭಾಗದ ಶಾಲೆಗಳಲ್ಲಿ ವಿರುದ್ಧ ಹೋರಾಟ:
ಕೇರಳದ ಗಡಿ ಭಾಗಗಳ ಶಾಲೆಗಳಲ್ಲಿ ಮಲಯಾಳಂನ್ನು ಮೊದಲ ಭಾಷೆಯಾಗಿ ಕಲಿಯುವುದನ್ನು ಕಡ್ಡಾಯಗೊಳಿಸಿರುವ ಬಗ್ಗೆ ಕೇರಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಹೋರಾಟವನ್ನೇ ಮಾಡುತ್ತೇವೆ ಎಂದರು.
ದ್ವೇಷ ಭಾಷಣ ಮಸೂದೆ ಕುರಿತು ರಾಜ್ಯಪಾಲರ ಭೇಟಿ:
ದ್ವೇಷ ಭಾಷಣಕ್ಕೆ ಸಂಬಂಧಿಸಿದ ಬಿಲ್ಲು ರಾಜ್ಯಪಾಲರ ಬಳಿಯೇ ಉಳಿದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ರಾಜ್ಯಪಾಲರನ್ನು ಒಮ್ಮೆ ಭೇಟಿಯಾಗಿ ವಿವರಣೆ ನೀಡಲಾಗುವುದು ಎಂದು ಹೇಳಿದರು.














