ಬೆಂಗಳೂರು: ಆನ್‌ಲೈನ್ ಔಷಧ ಮಾರಾಟ ಹಾಗೂ ಅಸಹಜ ರಿಯಾಯಿತಿಗಳ ವಿರುದ್ಧ ಮೇ 20 ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಬಂದ್‌ನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಭಾಗವಹಿಸುವುದಿಲ್ಲ. ಆದರೆ ಕಪ್ಪು ಪಟ್ಟಿ ಧರಿಸಿ ನೈತಿಕ ಬೆಂಬಲ ಸೂಚಿಸುತ್ತೇವೆ ಎಂದು ಕರ್ನಾಟಕ ಫಾರ್ಮ ರಿಟೈಲರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್ ಅಧ್ಯಕ್ಷ ಸಿ.ಜಯರಾಮ್ ತಿಳಿಸಿದರು.
ಶನಿವಾರ ಪ್ರೆಸ್ ಕ್ಲಬ್ ನಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಆನ್‌ಲೈನ್ ಪೋರ್ಟಲ್‌ಗಳು ಅತಿಯಾದ ರಿಯಾಯಿತಿಗಳನ್ನು ಘೋಷಿಸುತ್ತಿದ್ದು ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿರುವ ಸಾಂಪ್ರದಾಯಿಕ ಮಾರಾಟಗಾರರು ಇಂತಹ ರಿಯಾಯಿತಿಗಳಿಂದ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇದನ್ನು ವಿರೋಧಿಸಿ ಮೇ 20 ರ ದೇಶವ್ಯಾಪಿ ಬಂದ್ ಕರೆಯಲಾಗಿದ್ದು, ಇದರಲ್ಲಿ ಜನರ ಹಿತದೃಷ್ಟಿಯಿಂದ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಪ್ಪು ಬ್ಯಾಡ್ಜ್/ರಿಬ್ಬನ್ ಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಔಷಧ ಅಂಗಡಿಗಳನ್ನು ಮುಚ್ಚದೇ, ಎಂದಿನಂತೆ ಕಾರ್ಯನಿರ್ವಹಿಸಿ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸೇವೆ ಮುಂದುವರಿಸಲಾಗುವುದು ಎಂದರು.
ಉಪಾಧ್ಯಕ್ಷ ರವೀಂದ್ರ ಸಿ.ಬಸನೂರು ಮಾತನಾಡಿ, ರಾಜ್ಯದ ವಿವಿಧ ಜಿಲ್ಲಾ ಸಂಘಟನೆಗಳು ಕೈಗೊಂಡಿರುವ ನಿರ್ಣಯಗಳಂತೆ, ರಾಜ್ಯಮಟ್ಟದ ಜವಾಬ್ದಾರಿಯುತ ಹಾಗೂ ಸಕ್ರಿಯ ಔಷಧ ವ್ಯಾಪಾರಿಗಳ ಸಂಘಟನೆಯಿಂದ ನಡೆಯಲಿರುವ ರಾಷ್ಟ್ರ ವ್ಯಾಪಿ ಬಂದ್ ಸಂದರ್ಭದಲ್ಲಿ ಕಪ್ಪು ಬ್ಯಾಡ್ಜ್/ರಿಬ್ಬನ್ ಧರಿಸುವ ಮೂಲಕ ವಿಷಯಾಧಾರಿತ ಹಾಗೂ ನೈತಿಕ ಬೆಂಬಲ ಸೂಚಿಸಲಿದ್ದೇವೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಔಷಧ ಅಂಗಡಿಗಳು ತೆರೆಯಲ್ಪಟ್ಟು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲಾಗುವುದು. ಇದರ ಮೂಲಕ ರಾಜ್ಯಾದಂತ ರೋಗಿಗಳು ಹಾಗೂ ಸಾರ್ವಜನಿಕರಿಗೆ ಔಷಧ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.
ಅನಧಿಕೃತ ಆನ್‌ಲೈನ್ ಔಷಧ ಮಾರಾಟ ಹಾಗೂ ಕ್ವಿಕ್ ಕಾಮರ್ಸ್ ಔಷಧ ಡೆಲಿವರಿ ಆ್ಯಪ್‌ಗಳು ಡ್ರಗ್ಸ್ ಅಂಡ್ ಕಾಸ್ಮಟಿಕ್ಸ್ ಕಾಯ್ದೆಯನ್ನು ಉಲ್ಲಂಘಿಸುತ್ತಿರುವ ಕುರಿತು ಕೆ.ಪಿ.ಅರ್.ಡಿ.ಒ ಸಂಸ್ಥೆ ಆಯುಕ್ತರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅವರಿಗೆ ಅನೇಕ ಬಾರಿ ವಿವರವಾದ ಮನವಿಗಳನ್ನು ಸಲ್ಲಿಸಿ, ಕಾನೂನು ಉಲ್ಲಂಘನೆಗಳ ಕುರಿತು ಗಮನ ಸೆಳೆದಿದ್ದೇವೆ. ಸಾರ್ವಜನಿಕ ಆರೋಗ್ಯ ರಕ್ಷಣೆ ಹಾಗೂ ವೇಗವಾಗಿ ಕುಸಿಯುತ್ತಿರುವ ಸಾಂಪ್ರದಾಯಿಕ ಔಷಧ ವ್ಯಾಪಾರವನ್ನು ಕಾಪಾಡುವ ನಿಟ್ಟಿನಲ್ಲಿ ಇಂತಹ ಸಂಸ್ಥೆಗಳ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಸಂಘಟನೆ ಹಿಂದೆಯೇ ಆಗ್ರಹಿಸಿದೆ ಎಂದು ತಿಳಿಸಿದರು















