ಬೆಂಗಳೂರು: ಯಶವಂತಪುರ ಹೋಬಳಿಯ ಸಜ್ಜೆಪಾಳ್ಯ ಗ್ರಾಮದ ಸರ್ವೇ ಸಂಖ್ಯೆ 15ರಲ್ಲಿರುವ 44 ಎಕರೆ 33 ಗುಂಟೆಗೆ ಜಮೀನಿಗೆ ಸಂಬಂಧಿಸಿದಂತೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿರುವ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠದ ಮೊರೆ ಹೋಗಲಾಗುವುದು ಎಂದು ಕೃಷ್ಣಪ್ಪ ರಂಗಮ್ಮ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎಚ್. ಎನ್.ಅಶೋಕ್ ಹೇಳಿದರು.
ಒಕ್ಕಲಿಗರ ಸಂಘದ ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಂಗಮ್ಮ ಎಂಬುವರು ಬರೆದಿರುವ ಇಚ್ಛಾಪತ್ರದ(ವಿಲ್) ಅನುಸಾರ ಈ ಜಮೀನು, ಶಿಕ್ಷಣ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ಮೀಸಲಿಡಲಾಗಿದೆ. 1978ರಲ್ಲಿ ಬರೆಯದಿರುವ ಪತ್ರದಲ್ಲಿ ಕೃಷ್ಣಪ್ಪ ರಂಗಮ್ಮ ಎಜುಕೇಷನ್ ಟ್ರಸ್ಟ್, ಈ ಜಮೀನನ್ನು ಶಿಕ್ಷಣಕ್ಕೆ ಬಳಸಿಕೊಳ್ಳುವ ಹಕ್ಕು ಹೊಂದಿದೆ. ದಶಕಗಳಿಂದ ಈ ಉದ್ದೇಶವನ್ನು ನಾವು ಪಾಲಿಸಿಕೊಂಡು ಬರುತ್ತಿದ್ದೇವೆ. ಹೈಕೋರ್ಟ್ನ ಏಕಸದಸ್ಯ ಪೀಠ ನೀಡಿರುವ ಆದೇಶದಲ್ಲಿ ಕೆಲವೊಂದು ಕಾನೂನು ಅಂಶಗಳು ಟ್ರಸ್ಟ್ ನಿಲುವಿಗೆ ವಿರುದ್ಧವಾಗಿದೆ. ಕೋರ್ಟ್ನ ಆದೇಶವನ್ನು ಸ್ವೀಕರಿಸಿದ್ದರೂ ಕಾನೂನು ಮತ್ತು ವಾಸ್ತವಾಂಶಗಳ ಆಧಾರದ ಮೇಲೆ ಈ ಆದೇಶದ ವಿರುದ್ಧ ಹೈಕೋರ್ಟ್ನ ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸ್ಫಟಿಕಪುರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಮತ್ತು ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ವಿಪಕ್ಷ ನಾಯಕ ಅರ್.ಅಶೋಕ್, ಸಚಿವ ಕೃಷ್ಣಬೈರೇಗೌಡ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಸೇರಿ ನಮ್ಮ ಜನಾಂಗದ ಇತರ ನಾಯಕರನ್ನು ಮತ್ತೊಮ್ಮೆ ಭೇಟಿ ಮಾಡಿ ಇದರ ಬಗ್ಗೆ ಸಲಹೆ ಪಡೆಯುತ್ತೇವೆ ಎಂದು ತಿಳಿಸಿದರು.
ಅವರೆಲ್ಲರೂ ಕೊಡುವ ಸಲಹೆಗಳನ್ನು ಪಡೆದು ಸಜ್ಜೇಪಾಳ್ಯದ ಜಮೀನು ರಕ್ಷಿಸಲಾಗುವುದು. ಜಮೀನನ್ನು ಟ್ರಸ್ಟ್ ಗೆ ವಿಲ್ ಮೂಲಕ ನೀಡಿರುವ ರಂಗಮ್ಮ ಅವರ ಇಚ್ಛೆಯಂತೆ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜು ಹಾಗೂ ವಿಶ್ವವಿದ್ಯಾಲಯ ಸ್ಥಾಪಿಸುವ ಉದ್ದೇಶವಿದೆ. ಈ ಕಾರ್ಯ ಸಾಧುವಾಗಲು ವಿವಾದ ಬಗೆಹರಿದು ಜಮೀನು ಟ್ರಸ್ಟ್ ನ ಸ್ವಾಧೀನಕ್ಕೆ ಬರಬೇಕಾಗಿದೆ. ಅದಕ್ಕಾಗಿ ನಿರಂತರ ಎಲ್ಲಾ ರೀತಿಯ ಹೋರಾಟ ಮಾಡುತ್ತೇವೆ. ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಪ್ರಾಮಾಣಿಕವಾಗಿ ಈ ಆಸ್ತಿ ರಕ್ಷಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಟ್ರಸ್ಟ್ ನಡೆಸುವ ಎಲ್ಲ ಹೋರಾಟಕ್ಕೆ ನಮ್ಮ ಜನಾಂಗದವರು ಬೆಂಬಲ ನೀಡಬೇಕು ಎಂದು ಎಚ್. ಎನ್.ಅಶೋಕ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೃಷ್ಣಪ್ಪ ರಂಗಮ್ಮ ಎಜುಕೇಷನ್ ಟ್ರಸ್ಟ್ ಟ್ರಸ್ಟಿಗಳಾದ ಎಸ್. ಎಸ್. ರಘುಗೌಡ, ಸಿ.ಎಂ.ಮಾರೇಗೌಡ, ವೆಂಕಟರಾಮೇಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್, ಗೌರವಾಧ್ಯಕ್ಷ ಬಿ.ಕೆಂಚಪ್ಪಗೌಡ, ಸಿ.ಜಿ.ಗಂಗಾಧರ್, ಉಪಾಧ್ಯಕ್ಷ ಡಾ. ಕೆ.ವಿ.ರೇಣುಕಾಪ್ರಸಾದ್, ಎಂ.ಪುಟ್ಟಸ್ವಾಮಿ, ಸಂಘದ ನಿರ್ದೇಶಕ ಡಾ. ಟಿ.ಎಚ್. ಆಂಜಿನಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.













