ಬೆಂಗಳೂರು: ಕಲಬುರಗಿಯ ಮಾನವೀಯ ಕಲ್ಯಾಣ ಟ್ರಸ್ಟ್ನ ಘಟಕವಾದ ಅರುಜೀವ ಆಯುರ್ವೇದ ಮತ್ತು ನ್ಯಾಚುರೋಪತಿ ಆಸ್ಪತ್ರೆ ಸಾರ್ವಜನಿಕರಿಗೆ ಸಮಗ್ರ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಮಧ್ಯ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ನೂತನ ಶಾಖೆ ತೆರೆಯುವ ಉದ್ದೇಶ ಹೊಂದಲಾಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಲಿಂಗರಾಜ್ ಎಸ್.ಪಾಟೀಲ ತಿಳಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುಷ್ ಸಚಿವಾಲಯದ ಮಾರ್ಗಸೂಚಿಗಳಡಿ ಆಯುಷ್ ಕ್ವಾಲಿಟಿ ಮಾರ್ಕ್ ಸೇರಿದಂತೆ ಗುಣಮಟ್ಟದ ಮಾನದಂಡಗಳಿಗೆ ಮಹತ್ವ ನೀಡಲಾಗಿದ್ದು, ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ ಹಾಗೂ ಸಮಗ್ರ ಆರೋಗ್ಯ ವಿಧಾನಗಳ ಮೂಲಕ ಜನರ ಆರೋಗ್ಯ ಮತ್ತು ಜೀವನಶೈಲಿಯ ಸುಧಾರಣೆಗೆ ಆಸ್ಪತ್ರೆ ಒತ್ತು ನೀಡುತ್ತಿದೆ ಎಂದರು.
ಅರುಜೀವ ಆಸ್ಪತ್ರೆಯ ಕಾರ್ಯನಿರ್ವಹಣಾಧಿಕಾರಿ ಡಾ.ಕೌಸ್ತುಭ ಧುಮಲ್ ಮಾತನಾಡಿ, ಅರುಜೀವ ಆಸ್ಪತ್ರೆ ಆಯುಷ್ ಇಲಾಖೆಯಿಂದ ಮಾನ್ಯತೆ ಪಡೆದುಕೊಂಡಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರು ಮತ್ತು ಅರ್ಹ ಫಲಾನುಭವಿಗಳು ಸರ್ಕಾರದ ಆರೋಗ್ಯ ವಿಮಾ ಯೋಜನೆಗಳ ಅಡಿಯಲ್ಲಿ ಅನ್ವಯವಾಗುವ ನಿಯಮಗಳ ಪ್ರಕಾರ ಆಯುರ್ವೇದ ಚಿಕಿತ್ಸಾ ವೆಚ್ಚದ ಮರುಪಾವತಿ ಸೌಲಭ್ಯ ಪಡೆಯಬಹುದಾಗಿದೆ. ಖಾಸಗಿ ಆರೋಗ್ಯ ವಿಮಾ ಯೋಜನೆಗಳ ಮೂಲಕ ನಗದುರಹಿತ ವಿಮಾ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದರು.
ಆಸ್ಪತ್ರೆಯು ರೋಗಿಗಳ ಆರೈಕೆ, ಆರೋಗ್ಯ ಜಾಗೃತಿ ಮತ್ತು ಚಿಕಿತ್ಸಾ ಸೇವೆಗಳಲ್ಲಿ ಗುಣಮಟ್ಟ ಕಾಪಾಡುವ ಉದ್ದೇಶ ಹೊಂದಿದೆ. ಸಾಂಪ್ರದಾಯಿಕ ಭಾರತೀಯ ಚಿಕಿತ್ಸಾ ಪದ್ಧತಿಗಳ ಪ್ರಯೋಜನಗಳನ್ನು ಜನರಿಗೆ ತಲುಪಿಸುವುದರ ಜೊತೆಗೆ, ಆರೋಗ್ಯಕರ ಜೀವನಶೈಲಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೂ ಆದ್ಯತೆ ನೀಡಲಾಗುತ್ತಿದೆ.
ಮಾನವೀಯ ಕಲ್ಯಾಣ ಟ್ರಸ್ಟ್ನ ಸೇವಾ ಧ್ಯೇಯದಡಿ ಆರೋಗ್ಯ ಕ್ಷೇತ್ರದಲ್ಲಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಪ್ರಯತ್ನ ನಡೆಯುತ್ತಿದೆ. ಯೋಗ, ಪ್ರಕೃತಿ ಚಿಕಿತ್ಸೆ ಮತ್ತು ಸಮಗ್ರ ಆರೋಗ್ಯ ನಿರ್ವಹಣೆಯ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಬೆಳೆಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆಯ ಸಲಹೆಗಾರ ಮನುಬಳಿಗಾರ್ ಮಾತನಾಡಿ, ಆಯುಷ್ ಗುಣಮಟ್ಟದ ಮಾನದಂಡಗಳು ಹಾಗೂ ಸೇವಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ವಿಶ್ವಾಸಾರ್ಹ ಆರೋಗ್ಯ ಸೇವೆ ಒದಗಿಸುವತ್ತ ಗಮನ ಹರಿಸಿದೆ. ಸಮಗ್ರ ಆರೋಗ್ಯ, ಗುಣಮಟ್ಟದ ಚಿಕಿತ್ಸೆ ಮತ್ತು ಮಾನವೀಯ ಸೇವೆ ಇವೇ ಸಂಸ್ಥೆಯ ಪ್ರಮುಖ ಆಶಯಗಳಾಗಿವೆ ಎಂದು ವಿವರಿಸಿದರು.














