ಸಂಸ್ಕೃತಿ ಉಳಿಸಲು ಯುವಜನತೆಗೆ ಸಂಸ್ಕಾರ ಅಗತ್ಯ: ಪರಮೇಶ್ವರ್

WhatsApp
Telegram
Facebook
Twitter
LinkedIn

ಬೆಂಗಳೂರು: ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆಗಿಂತಲೂ ಯುವಜನತೆಗೆ ಸಂಸ್ಕೃತಿ, ಸಂಸ್ಕಾರ ಹಾಗೂ ನೈತಿಕ ಮೌಲ್ಯಗಳ ಅಗತ್ಯ ಹೆಚ್ಚಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಡಾ. ಸಿ. ಸೋಮಶೇಖರ್–ಶ್ರೀಮತಿ ಎನ್. ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನದಿಂದ ಆಯೋಜಿಸಿದ್ದ ‘ಸಂಸ್ಕೃತಿ ಸಂಗಮ–2026’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತದ ಸಂಸ್ಕೃತಿ ಮತ್ತು ಪರಂಪರೆ ಅತ್ಯಂತ ಶ್ರೀಮಂತ ಹಾಗೂ ವೈವಿಧ್ಯಮಯವಾಗಿದ್ದು, ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಸಾಧನೆ ತಾನಾಗಿಯೇ ಒಲಿದು ಬರುವುದಿಲ್ಲ. ಕಠಿಣ ಪರಿಶ್ರಮ, ಶಿಸ್ತು, ಪ್ರಾಮಾಣಿಕತೆ ಹಾಗೂ ಸಮರ್ಪಣೆಯಿಂದ ಮಾತ್ರ ವ್ಯಕ್ತಿ ತನ್ನ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದರು.

ಇಂದಿನ ಯುವಪೀಳಿಗೆ ಶಿಕ್ಷಣ, ಉದ್ಯೋಗ ಮತ್ತು ಆಧುನಿಕ ಜೀವನಶೈಲಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆದರೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ಗೌರವ ಇಟ್ಟುಕೊಳ್ಳುವುದು ಕೂಡ ಅತ್ಯಗತ್ಯ. ಶಾಲೆಗಳಲ್ಲಿ ಹಿಂದೆ ಇದ್ದ ನೈತಿಕ ಶಿಕ್ಷಣದ ಮಹತ್ವ ಕಡಿಮೆಯಾಗುತ್ತಿರುವುದು ಕಳವಳಕಾರಿಯಾಗಿದೆ. ಆದ್ದರಿಂದ ಯುವಜನತೆಗೆ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಪರಿಚಯಿಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

2015ರಿಂದಲೂ ಯಾವುದೇ ಸ್ವಾರ್ಥವಿಲ್ಲದೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಡಾ. ಸಿ. ಸೋಮಶೇಖರ್ ಅವರ ಕಾರ್ಯವನ್ನು ಶ್ಲಾಘನೀಯ ನಿವೃತ್ತಿಯ ನಂತರವೂ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಸರ್ಕಾರ ನೀಡುವ ಪ್ರಶಸ್ತಿಗಳ ಮೌಲ್ಯ ಕುಂದದಂತೆ ಅರ್ಹ ಸಾಧಕರನ್ನು ಗುರುತಿಸಿ ಗೌರವಿಸುವುದು ಮುಖ್ಯವಾಗಿದೆ. ಪ್ರಶಸ್ತಿ ಪಡೆಯುವವರ ಸಾಧನೆ, ಸಮಾಜಕ್ಕೆ ನೀಡಿದ ಕೊಡುಗೆ ಹಾಗೂ ಅವರ ಸೇವೆಯನ್ನು ಕೂಡ ಪರಿಗಣಿಸುವುದು ಸಹ ಮರೆಯಬಾರದು ಎಂದರು.

ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ್ ವಿ. ಪಾಟೀಲ್ ಮಾತನಾಡಿ, ಪ್ರಶಸ್ತಿ ಸ್ವೀಕರಿಸುವ ಕ್ಷಣ ಸಾಧಕನ ಜೀವನದ ವಿಶೇಷ ಕ್ಷಣವಾಗಿದೆ. ಆದರೆ ಪ್ರಶಸ್ತಿಯ ನಿಜವಾದ ಮೌಲ್ಯ ಅದರ ಗಾತ್ರ ಅಥವಾ ಘನತೆಯಲ್ಲಿ ಇಲ್ಲ. ಅದನ್ನು ಪಡೆಯಲು ವ್ಯಕ್ತಿ ಮಾಡಿದ ಪರಿಶ್ರಮ, ಪ್ರಾಮಾಣಿಕ ಜೀವನ, ಸಾಧನೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯಲ್ಲಿ ಇದೆ. ವೈಯಕ್ತಿಕ ಯಶಸ್ಸನ್ನು ಸಮಾಜದ ಒಳಿತಿಗೆ ಬಳಸಿದಾಗ ಅದು ಉನ್ನತ ಮೌಲ್ಯ ಪಡೆಯುತ್ತದೆ. ತಮ್ಮ ಪ್ರತಿಭೆಯಿಂದ ಮತ್ತೊಬ್ಬರ ಜೀವನಕ್ಕೆ ಬೆಳಕು ತಂದಾಗ ಪ್ರಶಸ್ತಿಗೆ ನೈಜ ಸಾರ್ಥಕತೆ ದೊರೆಯುತ್ತದೆ. ಇಲ್ಲಿ ಪ್ರಶಸ್ತಿ ಪಡೆದವರು ಯಾರೂ ಅರ್ಜಿ ಸಲ್ಲಿಸಿಲ್ಲ ಅಥವಾ ಲಾಬಿ ಮಾಡಿಲ್ಲ. ಪ್ರಶಸ್ತಿಗಳೇ ಅವರನ್ನು ಹುಡುಕಿಕೊಂಡು ಬಂದಿವೆ. ನೈಜ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಸೋಮಶೇಖರ್ ಅವರ ಸಂಸ್ಥೆಯ ಕಾರ್ಯ ಅಭಿನಂದನೀಯ ಎಂದರು.

ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ಮಾತನಾಡಿ, ಡಾ. ಸಿ. ಸೋಮಶೇಖರ್ ಅವರು ಅಧಿಕಾರಿಯಾಗಿ ಗುರುತಿಸಿಕೊಂಡಿರುವುದಕ್ಕಿಂತಲೂ ಹೆಚ್ಚು ಸಾಹಿತ್ಯ ಪ್ರೇಮಿಯಾಗಿ ಗುರುತಿಸಿಕೊಂಡಿದ್ದಾರೆ. ದಕ್ಷ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುವುದರ ಜತೆಗೆ ನಾಡಿನ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯಕ್ರಮ ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ಸಾರುವ ವೇದಿಕೆಯಾಗಿದೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ‘ಮಾತೆಂಬುದು ಜ್ಯೋತಿರ್ಲಿಂಗ’ ಕೃತಿ ಬಿಡುಗಡೆ ಮಾಡಲಾಯಿತು. ಜಾನಪದ ಕ್ಷೇತ್ರದ ಡಾ. ಅಪ್ಪಗೆರೆ ತಿಮ್ಮರಾಜು, ದಾಸ ಸಾಹಿತ್ಯದ ಡಾ. ಎಚ್.ಎನ್. ಮುರಳೀಧರ್, ವಾಚನ ಸಾಹಿತ್ಯ ಕ್ಷೇತ್ರದ ಡಾ. ಎಂ.ಎಸ್. ಆಶಾದೇವಿ ಹಾಗೂ ಸಂಸ್ಕೃತಿ ಸಂಘಟನೆ ಕ್ಷೇತ್ರದ ಡಾ. ಕೆ.ವಿ. ನಾಗರಾಜ ಮೂರ್ತಿ ಅವರಿಗೆ ‘ಸಂಸ್ಕೃತಿ ಸಂಗಮ–2026’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಪ್ರತಿಷ್ಠಾನದ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಡಾ. ನಾಡೋಜ ವೂಡೇ ಪಿ. ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon