ಬೆಂಗಳೂರು: ಮಕ್ಕಳು ಸಮಾಜದ, ದೇಶದ ಭವಿಷ್ಯವಾಗಿದ್ದಾರೆ. ಅವರುಗಳು ತಂದೆ ತಾಯಿ, ಗುರು ಹಿರಿಯರ ಕುರಿತು ಗೌರವ ಬೆಳಸಿಕೊಂಡು ಸತ್ಪ್ರೆಜೆಗಳಾಗಿ ಬಾಳಿದರೆ ಮಾತ್ರ ರಾಷ್ಟ್ರ ಸದೃಢವಾಗಿ ಉಳಿಯಲು ಸಾಧ್ಯ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅಭಿಪ್ರಾಯಿಸಿದರು.
ಬುಧವಾರ ಬೆಂಗಳೂರು ಜ್ಯುವೆಲ್ಲರ್ಸ್ ಅಸೋಸಿಯೇಷನ್ ವತಿಯಿಂದ ಮೈಸೂರು ಬ್ಯಾಂಕ್ ವೃತ್ತದ ಎಫ್.ಕೆ.ಸಿ.ಸಿ.ಐ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿದ್ಯಾಜ್ಯೋತಿ- ವಿದ್ಯಾರ್ಥಿವೇತನ ನೀಡುವ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದ ಸೀಮಂತ್ ಕುಮಾರ್ ಸಿಂಗ್, ಮಕ್ಕಳು ಒಳ್ಳೆಯ ಓದನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಶಿಸ್ತನ್ನು ಪಾಲಿಸಬೇಕು. ಹಿರಿಯರ ಮಾತನ್ನು ಕೇಳುವ ಸೌಜನ್ಯ ಬೆಳೆಸಿಕೊಂಡರೆ ಮಾತ್ರ ಒಳ್ಳೆಯ ನಾಗರೀಕರಾಗಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಇಂದು ವಿಪುಲ ಅವಕಾಶಗಳಿವೆ. ಆದ್ದರಿಂದ ಕೇವಲ ಅಂಕಗಳಿಸುವ ಕಡೆಯಷ್ಟೇ ಗಮನ ಹರಿಸಬಾರದು. ಜೊತೆಗೆ ಜ್ಞಾನ ಸಂಪಾದನೆಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ಅದಕ್ಕೆ ಶ್ರಮವೊಂದೇ ಇರುವ ದಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ ಚೇತನ್ ಕುಮಾರ್ ಮೆಹತಾ ಮಾತನಾಡಿ, ಇಂದು ಅತ್ಯಂತ ಸಂಭ್ರಮದ ಅವಿಸ್ಮರಣೀಯ ದಿನವಾಗಿದೆ. 600 ಮಕ್ಕಳಿಗೆ ಸಂಘದ ವತಿಯಿಂದ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಇಷ್ಟೊಂದು ಸಂಖ್ಯೆಯ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಎಲ್ಲರಿಗೂ 5 ಸಾವಿರ ಮೊತ್ತದ ಚೆಕ್ ಕೊಡಲಾಗುತ್ತಿದೆ ಎಂದು ತಿಳಿಸಿದರು.
ಬರುವ ವರ್ಷದಲ್ಲಿ ಇನ್ನೂ ಹೆಚ್ಚು ಮಕ್ಕಳಿಗೆ ಪುರಸ್ಕಾರ ನೀಡುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ನಾಡಿನ ಭವಿಷವೇ ಮಕ್ಕಳಾಗಿದ್ದು, ಈ ನಿಟ್ಟಿನಲ್ಲಿ ಇನ್ನಷ್ಟು ಯೋಜನೆಗಳನ್ನು ರೂಪಿಸುವ ಕೆಲಸಕ್ಕೆ ಮುಂದಾಗಲಿದ್ದೇವೆ. ನಮ್ಮ ರಾಜ್ಯ, ದೇಶವನ್ನು ಇನ್ನಷ್ಟು ಸದೃಢಗೊಳಿಸುವುದು ಸಂಘದ ಗುರಿಯಾಗಿದೆ ಎಂದು ಹೇಳಿದರು.













