ಬೆಂಗಳೂರು: ಆದಿಚುಂಚನಗಿರಿ ವಿಶ್ವವಿದ್ಯಾಲಯದ ಇನ್ಸಿಟ್ಯೂಟ್ ಆಫ್ ಮಾಲಿಕ್ಯೂಲರ್ ಮೆಡಿಸಿನ್ ಕಾಲೇಜಿನಲ್ಲಿ ಎರಡು ದಿನದ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ವಿವಿ ಕುಲಸಚಿವ ಡಾ.ಸಿ.ಕೆ ಸುಬ್ಬರಾಯ ಮಾಹಿತಿ ನೀಡಿದರು.
ಗುರುವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಾಧಿಪತಿ ಪರಮಪೂಜ್ಯ ಜಗದ್ಗುರು ನಿರ್ಮಲಾನಂದನಾಥ ಮಹಾ ಸ್ವಾಮೀಜಿ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟಸಲಿದ್ದಾರೆ ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ್ ಪ್ರಕಾಶ್ ರುದ್ರಪ್ಪ ಪಾಟೀಲ್ ಹಾಗೂ ಶಾಸಕ ಹಾಗೂ ಮಾಜಿ ಕೃಷಿ ಸಚಿವ ಚೆಲುವರಾಯಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಸ್.ಇ.ಆರ್.ಬಿ ನ್ಯಾಷನಲ್ ಸೈನ್ಸ್ ಅಧ್ಯಕ್ಷ ಹಾಗೂ ಐ.ಐ.ಎಸ್.ಇ.ಆರ್ ತಿರುವತಿಯ ನಿಕಟಪೂರ್ವ ನಿರ್ದೇಶಕ ಪ್ರೊ ಕೆ ಎನ್ ಗಣೇಶ್ ಉಪಸ್ಥಿತರಿರಲಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿವಿ ಯ ವಿಶ್ರಾಂತ ಕುಲಪತಿ ಹಾಗೂ ಎನ್ಎಎಸ್ಐ ಪೀಠದ ಪ್ರಾಧ್ಯಾಪಕ ಪ್ರೊ ಕೆ ಎಸ್ ರಂಗಪ್ಪ, ಜಪಾನಿನ ಹಾಕೈಡೋ ವಿವಿಯ ಹಿರಿಯ ಪ್ರಾಧ್ಯಾಪಕ ಪ್ರೊ ಶಿನ್ ಇಚಿರೊನಿಶಿಮುರ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಜಪಾನ್, ಇತಿಯೋಫಿಯಾ ಸೇರಿದಂತೆ ವಿವಿಧ ದೇಶಗಳಿಂದ ಪ್ರಬಂಧಗಳನ್ನು ಮಂಡಿಸಲು 13 ಜನ ಹಿರಿಯ ಸಂಶೋಧಕರು, ಪ್ರಾಧ್ಯಪಕರ ಆಗಮಿಸಲಿದ್ದಾರೆ. ವಿಚಾರ ಸಂಕಿರಣದಲ್ಲಿ ವಿವಿಯ ಕುಲಪತಿ ಕರ್ನಲ್ ಡಾ. ಎಸ್.ಎ ಶ್ರೀಧರ ಹಾಗೂ ಅಕಾಡೆಮಿಕ್ ಮುಖ್ಯಸ್ಥ ಡಾ. ಬಿ ರಮೇಶ್ ಹಾಗೂ ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಡಾ. ಎಮ್ ಜಿ ಶಿವರಾಮು ಈ ಕಾರ್ಯಮದ ಆಯೋಜಕರಾಗಿದ್ದಾರೆ. ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಮಾಲಿಕ್ಯೂಲರ್ ಮೆಡಿಸಿನ್ ಮುಖ್ಯಸ್ಥ ಡಾ ಪ್ರಶಾಂತ ಕಾಳಪ್ಪ ಸಂಚಾಲಕರಾಗಿದ್ದಾರೆ ಎಂದು ಡಾ.ಸಿ.ಕೆ ಸುಬ್ಬರಾಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಮಾಲಿಕ್ಯುಲರ್ ಮೆಡಿಸಿನ್ ನಿರ್ದೇಶಕ ಡಾ ಶೋಬಿತ್ ರಂಗಪ್ಪ ಉಪಸ್ಥಿತರಿದ್ದರು.














