ಬೆಂಗಳೂರು: ಥಲಸ್ಸೆಮಿಯಾ ರೋಗದಿಂದ ಬಳಲುತ್ತಿದ್ದ 12 ವರ್ಷದ ಬಾಲಕಿಗೆ ಕೋಲಾರದ 27 ವರ್ಷದ ದಿಲೀಪ್ ಕೆ ತನ್ನ ಕಾಂಡಕೋಶ ದಾನ ಮಾಡಿ ಆಕೆಗೆ ಮರುಜನ್ಮ ನೀಡಿದ್ದಾರೆ.
ಭಾರತದಲ್ಲಿ ಪ್ರತಿ ವರ್ಷ 10 ಸಾವಿರಕ್ಕೂ ಅಧಿಕ ಮಕ್ಕಳು ಥಲಸ್ಸೆಮಿಯಾದೊಂದಿಗೆ ಜನಿಸುತ್ತಾರೆ. ಈ ಪ್ರಕರಣದಲ್ಲಿ ಬಾಲಕಿಗೆ ಆರಂಭಿಕ ಹಂತದಲ್ಲೇ ಬೀಟಾ ಥಲಸ್ಸೆಮಿಯಾ ಗಂಭೀರತೆ ಇರುವುದು ಪತ್ತೆಯಾಗಿತ್ತು. ಆಗ ಕಾಂಡಕೋಶ ಕಸಿ ಅವಳಿಗಿದ್ದ ಏಕೈಕ ಗುಣಪಡಿಸುವ ಆಯ್ಕೆಯಾಗಿತ್ತು. ಆಕೆಯ ಕುಟುಂಬದ ಹೊರಗಿನ ಹೊಂದಾಣಿಕೆಯ ದಾನಿ ಸಿಗುವುದು ಖಚಿತವಿರಲಿಲ್ಲ. ಆದರೆ, ದಿಲೀಪ್ ಅವರ ಹೊಂದಾಣಿಕ ಸಿಕ್ಕಾಗ, ರೋಗಿಯ ಕುಟುಂಬ ಹಾಗೂ ವೈದ್ಯರ ತಂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿತು.
ಗುರುವಾರ ಈ ಕುರಿತು ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಎಂ.ಎಸ್ ಫೌಂಡೇಶನ್ ಇಂಡಿಯಾ ಕಾರ್ಯನಿರ್ವಾಹಕ ಅಧ್ಯಕ್ಷ ಪ್ಯಾಟ್ರಿಕ್ ಪಾಲ್, ರಕ್ತದ ಕ್ಯಾನ್ಸರ್ ಮತ್ತು ಇತರೆ ರಕ್ತದ ಕಾಯಿಲೆಗಳಂತಹ ಮಾರಾಣಾಂತಿಕ ಕಾಯಿಲೆಗಳಿಗೆ ದುಬಾರಿ ವೆಚ್ಚದ ಕಾರಣದಿಂದಾಗಿ ಅತ್ಯಾಧುನಿಕ ಚಿಕಿತ್ಸೆ ಪಡೆಯಲು ಸಾಕಷ್ಟು ಸವಾಲುಗಳನ್ನು ಎದುರಾಗುತ್ತವೆ. ಚಿಕಿತ್ಸೆಯ ಆಯ್ಕೆಗಳ ಬಗ್ಗೆ ಮಾರ್ಗದರ್ಶನ ಮತ್ತು ಆರ್ಥಿಕ ಬೆಂಬಲದ ಸಂಭಾವ್ಯ ಮೂಲಗಳು ಭಾರತದಲ್ಲಿ ಚಿಕಿತ್ಸೆಯ ಲಭ್ಯತೆಯ ಮೇಲೆ ಪ್ರಭಾವ ಬೀರುವ ಅತ್ಯಂತ ನಿರ್ಣಾಯಕ ಅಂಶಗಳಾಗಿವೆ ಎಂದರು.
ಡಿ.ಕೆ.ಎಂ.ಎಸ್ ಸಮೂಹದ ಜಾಗತಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಲ್ಕೆ ನುಜಾರ್ ಮಾತನಾಡಿ, ಭಾರತದ ಡಿ.ಕೆ.ಎಂ.ಎಸ್ ಫೌಂಡೇಶನ್ ಥಲಸ್ಸೆಮಿಯಾ ಕಾರ್ಯಕ್ರಮವನ್ನು ಚಿಕಿತ್ಸಾ ವೆಚ್ಚ ಹಾಗೂ ಲಭ್ಯತೆಯ ನಡುವಿನ ಗಂಭೀರ ಅಂತರವನ್ನು ನಿವಾರಿಸಲು ವಿನ್ಯಾಸಗೊಳಿಸಲಾಗಿದೆ. ಆರ್ಥಿಕ ಮುಗ್ಗಟ್ಟು ಅನೇಕ ಬಾರಿ ರೋಗಿಗಳು ಗುಣಪಡಿಸುವ ಚಿಕಿತ್ಸೆಯನ್ನು ಪಡೆಯದಂತೆ ತಡೆಯುತ್ತದೆ. ಬೀಟಾ ಥಲಸ್ಸೆಮಿಯಾದಿಂದ ಬಳಲುತ್ತಿರುವ 12 ವರ್ಷದೊಳಗಿನ ಮಕ್ಕಳಿಗೆ ಉಚಿತ ಎಚ್‌ಎಲ್‌ಎ ಟೈಪಿಂಗ್‌ನಂತಹ ಉಪಕ್ರಮಗಳ ಮೂಲಕ ಕಸಿ ಪ್ರಕ್ರಿಯೆಯ ಹಾದಿಯಲ್ಲಿರುವ ಕುಟುಂಬಗಳ ಹೊರೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಬ್ಲಡ್‌ಕೇರ್ ಹೆಮಟಾಲಜಿ ಕ್ಲಿನಿಕ್ ಮತ್ತು ಡಯಾಗ್ನೋಸ್ಟಿಕ್ ಸೆಂಟರ್‌ನ ಕನ್ಸಲ್ಟೆಂಟ್ ಹೆಮಟಾಕಜಿಸ್ಟ್ ಡಾ. ಸಿದ್ದೇಶ್ ಕಲಾಂತ್ರಿ ಸೇರಿದಂತೆ ಇತರರಿದ್ದರು.















