ಬೆಂಗಳೂರು: ಅವೈಜ್ಞಾನಿಕ ಮತ್ತು ಅಪೂರ್ಣವಾದ ದತ್ತಾಂಶವನ್ನು ಆಧರಿಸಿ ಒಳಮೀಸಲಾತಿಯನ್ನು ಕಲ್ಪಿಸುವುದು ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿದೆ ಎಂದು ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಹೇಳಿದರು.
ಗುರುವಾರ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿರುವ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಹಾಗೂ 2025 ರ ಆಗಸ್ಟ್ 18 ರಂದು ನಡೆದ ವಿಶೇಷ ಸಚಿವ ಸಂಪುಟದ ನಿರ್ಣಯವನ್ನು ಮರುಪರಿಶೀಲಿಸಿ ನಿರ್ಣಯವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬಗ್ಗೆ ಸೂಕ್ತ ವರದಿ ಸಲ್ಲಿಸಲು ನಿವೃತ್ತ ನ್ಯಾಯಾಧೀಶ ಹೆಚ್. ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಾಜ್ಯ ಸರ್ಕಾರ ರಚಿಸಿತ್ತು. ಎಂಪಿರಿಕಲ್ ಡೇಟಾ ಕಲೆಹಾಕಲು ಸಮೀಕ್ಷೆಯನ್ನು ಕೈಗೆತ್ತಿಕೊಂಡ ಆಯೋಗವು ಬೆಂಗಳೂರು ಮಹಾನಗರ ಸೇರಿದಂತೆ ಯಾವ ಜಿಲ್ಲೆಯಲ್ಲೂ ಸಮೀಕ್ಷೆಯನ್ನು ಪೂರ್ಣಗೊಳಿಸಿಲ್ಲ. ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ ಬೆಂಗಳೂರು ಮಹಾನಗರದಲ್ಲಿ ಕೇವಲ 48% ಮತ್ತು ಜಿಲ್ಲೆಗಳಲ್ಲಿ 52% ಮಾತ್ರ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಆಯೋಗ ಇದೇ ಅಪೂರ್ಣವಾದ ದತ್ತಾಂಶದ ಆಧಾರದ ಮೇಲೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವುದು ಸರಿಯಲ್ಲ ಎಂದು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಲಭ್ಯವಿರುವ ದತ್ತಾಂಶ ಮತ್ತು 2011ರ ಜನಗಣತಿಯನ್ನು ಪರಿಗಣಿಸಿ, ವೈಜ್ಞಾನಿಕವಾಗಿ ತರ್ಕಬದ್ಧ ಒಳಮೀಸಲಾತಿ ಮತ್ತು ಪರಿಶಿಷ್ಟ ಜಾತಿಗಳಲ್ಲಿ ಸಮಾನ ಜಾತಿಯ ಉಪ-ಜಾತಿಗಳ ಗುಂಪುಗಳನ್ನು ಒಟ್ಟುಗೂಡಿಸುವ ಬಗ್ಗೆ ಪರಿಶೀಲಿಸಬೇಕು ಎಂದು ಛಲವಾದಿ ಗುರುಪೀಠ ಸಂಸ್ಥಾನದ ಬಸವನಾಗಿ ದೇವ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಸರ್ಕಾರಕ್ಕೆ ಒತ್ತಾಯಿಸಿದರು.
ಪರಿಶಿಷ್ಟ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಕಲ್ಪಿಸುವುದು ನ್ಯಾಯಾಂಗದ ಉಲ್ಲಂಘನೆಯಾಗುತ್ತದೆ. ಹಾಗಾಗಿ ಮಾನ್ಯತೆ ಹೊಂದಿರುವ ದತ್ತಾಂಶ ಇಲ್ಲದ ಹೊರೆತು, ಯಾವ ಸೂತ್ರವನ್ನು ಬಳಸಿದರೂ ಪರಿಶಿಷ್ಟ ಜಾತಿಯ ಹಿಂದಿನ 15% ಮೀಸಲಾತಿಯಲ್ಲಿ ಒಳಮೀಸಲಾತಿ ಅಸಾಧ್ಯ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಉರಿಲಿಂಗ ಪೆದ್ದಿ ಮಠದ ಸಿದ್ದರಾಮ ಶಿವಯೋಗಿ ಸ್ವಾಮಿ, ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ರಾಜ್ಯ ಸಂಚಾಲಕ ಶಿವಣ್ಣ ಬಿ. ಕನಕಪುರ, ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಸಿದ್ದಲಿಂಗಯ್ಯ, ಹಿರಿಯ ದಲಿತ ಮುಖಂಡ ಸಿದ್ದಪ್ಪ, ಡಾ. ದೀಪಕ್ ಅಪ್ಪಾಜಿ, ಅಪ್ಪಗೆರೆ ಪ್ರದೀಪ್, ಗೌರಿ ಶಂಕರ್, ಶಿವರಾಜ್, ಡಾ. ಈಶ್ವರ್ ಸಿರಿಗೇರಿ, ಬಸವರಾಜ ಸಿದ್ರಾಂಪುರ, ಒಕ್ಕೂಟದ ಪದಾಧಿಕಾರಿಗಳು, ಮತ್ತಿತರರು
ಉಪಸ್ಥಿತರಿದ್ದರು.















