ಐವತ್ತರ ಸಂಭ್ರಮದಲ್ಲಿ ಮಗ್ಗಿಪುಸ್ತಕ ಸಿನೆಮಾ

WhatsApp
Telegram
Facebook
Twitter
LinkedIn

ಬೆಂಗಳೂರು: ಹರಿವರಾಸನಂ ತಾವೇ ಬರೆದ ಅವನಿ ಎಂಬ ಕಾದಂಬರಿಯನ್ನಾಧರಿಸಿ, ಕಥೆ, ಚಿತ್ರಕಥೆ ಬರೆದು  ನಿರ್ದೇಶನ ಮಾಡಿದ ಚಿತ್ರ ಮಗ್ಗಿ ಪುಸ್ತಕ ಇದೀಗ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ ಮುನ್ನಡೆದಿದೆ.

ಬಡ ಕುಟುಂಬದ ಅವನಿ ಎಂಬ ಹೆಣ್ಣು ಮಗಳ ಸುತ್ತ ನಡೆಯುವ ಮಗ್ಗಿಪುಸ್ತಕ ಚಿತ್ರದ ಐವತ್ತರ ಸಂಭ್ರಮ ಸಮಾರಂಭ ಮಂಗಳವಾರ ನಡೆದಿದ್ದು, ಈ ಸಂದರ್ಭದಲ್ಲಿ ಚಿತ್ರದಲ್ಲಿ ಕೆಲಸ ಮಾಡಿ ಗೆಲುವಿಗೆ ಕಾರಣರಾದ ಕಲಾವಿದರು ಹಾಗೂ ತಂತ್ರಜ್ಞರಿಗೆ ಸ್ಮರಣಫಲಕ ನೀಡಿ ಗೌರವಿಸಲಾಯಿತು. ಒಟ್ಟು 4 ಆಯಾಮಗಳಲ್ಲಿ ನಡೆಯುವ ಕಥೆಯನ್ನು  ಒಳಗೊಂಡ ಈ ಚಿತ್ರದಲ್ಲಿ ಮಕ್ಕಳ ಜತೆಗೆ ಪೋಷಕರಿಗೂ ಉತ್ತಮ ಸಂದೇಶವಿರುವುದು ವಿಶೇಷವಾಗಿದೆ.

ನಿರ್ದೇಶಕ ಹರಿವರಾಸನಂ ತಮ್ಮ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ನಾಡಿ ಮಿಡಿತವನ್ನರಿತು ಚಿತ್ರ ನಿರೂಪಿಸಿದ್ದಾರೆ. ಅವರ ಪ್ರಥಮ ಚಿತ್ರವೇ 50 ದಿನಗಳನ್ನು ಪೂರೈಸಿದೆ. ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು, ಪೋಷಕರು ಚಿತ್ರ ವೀಕ್ಷಿಸಿ ಮೆಚ್ಚಿಕೊಂಡಿದ್ದು, ಸದ್ಯ ಈ ಚಿತ್ರ ಉತ್ತರ ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಚಿನ್ನಸ್ವಾಮಿ ಫಿಲಂಸ್ ಅಡಿ ಎತಿರಾಜ್ ಅವರು ಈ ಚಿತ್ರವನ್ನು ನಿರ್ಮಿಸಿರುವ ಮಗ್ಗಿ ಪುಸ್ತಕ ಚಿತ್ರ ಬದುಕಿನ ಲೆಕ್ಕಾಚಾರವಾಗಿದ್ದು, ಜೀವನವೇ ಒಂದು ಮಗ್ಗಿ ಪುಸ್ತಕವಿದ್ದಂತೆ, ಇದರಲ್ಲಿ ಒಳ್ಳೆಯದನ್ನು ಕೂಡಬೇಕು, ಕೆಟ್ಟದ್ದನ್ನು ಕಳೆಯಬೇಕು, ಅಜ್ಞಾನವನ್ನು ಗುಣಿಸಬೇಕು, ಜ್ಞಾನವನ್ನು ಭಾಗಿಸಬೇಕು ಎಂಬ ಸಂದೇಶವಿದೆ, ನಾಲ್ಕು ಆಯಾಮಗಳಲ್ಲಿ ನಡೆಯುವ ಹೈಪರ್ ಲಿಂಕ್ ಕಥೆ ಇದಾಗಿದೆ.

ಬೆಂಗಳೂರು, ಮೈಸೂರು, ಮಂಗಳೂರು, ನಂಜನಗೂಡು, ಶ್ರೀರಂಗಪಟ್ಟಣ, ಹೆಚ್.ಡಿ.ಕೋಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು 80ಕ್ಕೂ ಹೆಚ್ಚು ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಮಗ್ಗಿಪುಸ್ತಕ ಚಿತ್ರದಲ್ಲಿ ಒಟ್ಟು 7 ಹಾಡುಗಳಿದ್ದು ಎಸ್.ಎಸ್. ನಾಚಪ್ಪ ಅವರ ಸಂಗೀತ ಸಂಯೋಜನೆಯಿದೆ. ಎಂ.ಎಂ.ಕೀರವಾಣಿ ಅವರು ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿರುವುದು ವಿಶೇಷವಾಗಿದೆ. ಉಳಿದಂತೆ ಕನ್ನಡ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ ಪ್ರಕಾಶ್, ಕಂಭದ ರಂಗಯ್ಯ, ನವೀನ್ ಸಜ್ಜು, ಇಂದು ನಾಗರಾಜ್, ಗುರುರಾಜ್ ಹೊಸಕೋಟೆ, ಸೈಂಧವಿ, ವೈಕಂ ವಿಜಯಲಕ್ಷ್ಮಿ ಹಾಗೂ ರವೀಂದ್ರ ಸೊರಗಾವಿ ಸೇರಿದಂತೆ 17 ಜನ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.

ಸಮಾರಂಭದ ವೇದಿಕೆಯಲ್ಲಿ ಮಾತನಾಡಿದ ಹರಿವರಾಸನಂ, ಇಡೀ ಚಿತ್ರತಂಡದ ಪರಿಶ್ರಮವೇ ಈ ಯಶಸ್ಸಿಗೆ ಕಾರಣವಾಗಿದೆ. ನಮ್ಮ ಚಿತ್ರ 100 ದಿನಗಳನ್ನೂ ಪೂರೈಸಬೇಕೆಂಬ ಆಸೆಯಿದೆ, ಚಿತ್ರವೀಗ 13 ಥೇಟರ್‌ಗಳಲ್ಲಿ ರನ್ ಆಗುತ್ತಿದೆ. ಮುಂದಿನ ವಾರದಿಂದ, ರಜೆ ಪ್ರಾರಂಭವಾಗುತ್ತಿದ್ದು, ಮತ್ತಷ್ಟು ಥೇಟರ್‌ಗಳು ಸೇರ್ಪಡೆಯಾಗುತ್ತಿವೆ ಎಂದು ಹೇಳಿದರು.

ಸದ್ಯ ಪರೀಕ್ಷೆಗಳು ಮುಗಿಯುತ್ತಿದ್ದು, ಈ ವಾರ ಭೂಮಿಕಾ ಸೇರಿದಂತೆ ಮತ್ತಷ್ಟು ಸೆಂಟರ್‌ಗಳಲ್ಲಿ ಚಿತ್ರ ರಿಲೀಸಾಗುತ್ತಿದೆ, ಚಿತ್ರದ ಕಲೆಕ್ಷನ್ ಕೂಡ ಜಾಸ್ತಿಯಾಗುವ ನಿರೀಕ್ಷೆಯಿದೆ, ಅಲ್ಲದೆ ನಮ್ಮ ಚಿತ್ರದ ಓಟಿಟಿ ಹಕ್ಕನ್ನು ಅಮೆಜಾನ್ ಸಂಸ್ಥೆ ಪಡೆದಿದೆ ಎಂದೂ ನಿರ್ದೇಶಕರು ಹೇಳಿದರು.

ನಿರ್ಮಾಪಕ ಎತಿರಾಜ್ ಮಾತನಾಡಿ, ನಮ್ಮ ಚಿತ್ರ 50 ದಿನ ಓಡಿದ್ದೇ ಖುಷಿಯ ವಿಚಾರ, ಈ ಯಶಸ್ಸಿಗೆ ಸಹಕರಿಸಿದ ಎಲ್ಲ  ತಂತ್ರಜ್ಞರು, ಕಲಾವಿದರಿಗೆ ನನ್ನ ಕೃತಜ್ಞತೆಗಳು ಎಂದು ಹೇಳಿದರು. ಸಂಗೀತ ನಿರ್ದೇಶಕ ಯಶಸ್ ನಾಚಪ್ಪ ಮಾತನಾಡಿ 50 ದಿನ ಅನ್ನೋದೇ ವಿಶೇಷವಾಗಿದೆ. ನನ್ನ ಮೊದಲ ಚಿತ್ರವೇ 50 ದಿನ ಕಂಡಿದೆ. 7 ಹಾಡುಗಳನ್ನು 17 ಜನ ಸಿಂಗರ್ಸ್ ಹಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಇನ್ನು ಛಾಯಾಗ್ರಾಹಕ ನಂದಕುಮಾರ್ ಮಾತನಾಡಿ, ಈ ಸಕ್ಸಸ್ಸಿಗೆ ಕಾರಣ ನಮ್ಮ ನಿರ್ದೇಶಕರು. ಅವರು ಚಿತ್ರಕ್ಕಾಗಿ ತುಂಬಾ ಕಷ್ಟಪಟ್ಟಿದ್ದಾರೆ. ಈಗಿನ ದಿನಗಳಲ್ಲಿ ಸಿನಿಮಾ 50 ದಿನ ಓಡುವುದು ತುಂಬಾ ಕಮ್ಮಿ, ನನ್ನ ಇಷ್ಟು ದಿನಗಳ ಜರ್ನಿಯಲ್ಲಿ 50 ದಿನ ಕಂಡ ಮೊದಲ ಚಿತ್ರವಿದು ಎಂದು ಸಂತಸ ವ್ಯಕ್ತಪಡಿಸಿದರು.

ಈ ಚಿತ್ರವನ್ನು ಎಂ.ಪಿ. ಫಿಲಂಸ್ ಮೂಲಕ ಕೆ. ಮುನೀಂದ್ರ ಅವರು ರಿಲೀಸ್ ಮಾಡಿದ್ದರು. ಅವರ ಸಂಸ್ಥೆಯಿಂದ ಬಿಡುಗಡೆಯಾದ ಮೊದಲ 2 ಚಿತ್ರಗಳೂ 50 ದಿನ ಪೂರೈಸಿದೆ. ಈ ಕುರಿತು ಮಾತನಾಡಿದ  ಮುನೀಂದ್ರ ಈ ಹಿಂದೆ ನಾವೇ ರಿಲೀಸ್ ಮಾಡಿದ ಕಂಗ್ರಾಚುಲೇಶನ್ಸ್ ಬ್ರದರ್ ಕೂಡ 50 ದಿನ ಪ್ರದರ್ಶನ ಕಂಡಿತ್ತು, ಇದು ಎರಡನೇ ಚಿತ್ರ ಎಂದರು.

ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ರಂಜನ್ ಕಾಸರಗೋಡು, ರಾನ್ವಿ ಶೇಖರ್, ಮಹೇಶ್, ಮೋಹಿತ್,  ಮೈಸೂರು ರಮಾನಂದ್, ಮೂಗು ಸುರೇಶ್, ಪಂಕಜ, ಅಗಸ್ತ್ಯ ಅಲ್ಲದೆ ಸಂಗೀತ ನಿರ್ದೇಶಕರು, ಸಂಕಲನಕಾರರು ಹಾಗೂ ಛಾಯಾಗ್ರಾಹಕರಿಗೂ ಸಹ ವೇದಿಕೆಯಲ್ಲಿ ಸ್ಮರಣಫಲಕ ವಿತರಿಸಿ ಗೌರವಿಸಲಾಯಿತು, ಮೇಘಶ್ರೀ, ರಕ್ಷಾ ಗೌಡ, ಮಿಮಿಕ್ರಿ ಗೋಪಿ, ಚಂದ್ರಪ್ರಭ, ರಘು ರಾಮನಕೊಪ್ಪ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon