ಬೆಂಗಳೂರು: ಎಸ್.ಆರ್.ಟಿ ಡ್ಯಾನ್ಸ್ ಅಂಡ್ ಫಿಟ್‌ನೆಸ್ ಸ್ಟುಡಿಯೋ ಹಾಗೂ ಎಸ್.ಆರ್.ಟಿ ಇವೆಂಟ್ಸ್ ಜಂಟಿಯಾಗಿ ಹಮ್ಮಿಕೊಂಡಿದ್ದ ಡ್ಯಾನ್ಸ್ ರಾಜಾ ಡ್ಯಾನ್ಸ್ ನೃತ್ಯ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಯಶಸ್ವಿಯಾಗಿ ವಸಂತನಗರದ ಡಾ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಧಾರಾವಾಹಿ ನಟಿ ಸಿಂಧು ರಾವ್ ಮಾತನಾಡಿ, ನನ್ನ ಬಿಡುವಿಲ್ಲದ ಶೂಟಿಂಗ್ ವೇಳಾಪಟ್ಟಿಯ ನಡುವೆಯೂ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ಅತ್ಯಂತ ಸಂತೋಷ ತಂದಿದೆ. ನನ್ನ ಚಿಕ್ಕ ಮಗ ಕೂಡ ಇತ್ತೀಚೆಗಷ್ಟೇ ನೃತ್ಯ ತರಗತಿಗೆ ಸೇರಿಕೊಂಡಿದ್ದು, ಮಕ್ಕಳಲ್ಲಿರುವ ನೃತ್ಯ ಕಲೆಯನ್ನು ಪ್ರೋತ್ಸಾಹಿಸುವ ಇಂತಹ ವೇದಿಕೆಗಳು ನಿಜಕ್ಕೂ ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ ಬಿಗ್ ಬಾಸ್ ಖ್ಯಾತಿಯ ಧನುಷ್ ಗೌಡ ಮಾತನಾಡಿ, ಗುರುವಿಗೆ ಗೌರವ ಸಲ್ಲಿಸುವ ಹಾಗೂ ವಿದ್ಯೆಯನ್ನು ಧಾರೆ ಎರೆದು ಪ್ರದರ್ಶಿಸುವ ಇಂತಹ ಪ್ರಯತ್ನಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ಎಸ್.ಆರ್.ಟಿ ಡ್ಯಾನ್ಸ್ ತಂಡದ ಈ ಕಾರ್ಯಕ್ರಮವು ಯಾವುದೇ ಪ್ರಸಿದ್ಧ ರಿಯಾಲಿಟಿ ಶೋಗಳಿಗಿಂತ ಕಡಿಮೆಯಿಲ್ಲದಂತೆ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್.ಆರ್.ಟಿ ಡ್ಯಾನ್ಸ್ ಸಂಸ್ಥೆಯ ಸಿಇಒ ಮೋನಿಶಾ ಮಾತನಾಡಿ, ಕಳೆದ 5 ವರ್ಷಗಳಿಂದ ನಮ್ಮ ಸಂಸ್ಥೆಯಲ್ಲಿ ಸತತವಾಗಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಶ್ರಮ ಮತ್ತು ಅವರ ಪೋಷಕರ ಬೆಂಬಲವೇ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಿದೆ. ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ದೊಡ್ಡ ವೇದಿಕೆಯನ್ನು ಒದಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಖ್ಯಾತ ನಟಿ ಯೋಗಿತಾ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಮೆರುಗು ತುಂಬಿದರು. ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ಮೂಡಿಬಂದ ವಿವಿಧ ಪ್ರಕಾರದ ನೃತ್ಯ ಪ್ರದರ್ಶನಗಳು ಪ್ರೇಕ್ಷಕರ ಮನಸೂರೆಗೊಂಡವು.














