ಬೆಳಗಾವಿ: ಸಾರ್ವಜನಿಕರಲ್ಲಿ ಬ್ಯಾಂಕಿಂಗ್ ವ್ಯವಹಾರ ಹಾಗೂ ಆರ್ಥಿಕ ಶಿಸ್ತಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಫೆ. 9 ರಿಂದ 13 ರವರೆಗೆ ಜಿಲ್ಲೆಯಾದ್ಯಂತ ಐದು ದಿನಗಳವರೆಗೆ ಆರ್ಥಿಕ ಸಾಕ್ಷರತಾ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ ಪ್ರಚಾರ ಪತ್ರಗಳನ್ನು (ಪೋಸ್ಟರ್) ಬಿಡುಗಡೆಗೊಳಿಸುವ ಮೂಲಕ ಆರ್ಥಿಕ ಸಾಕ್ಷರತಾ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಣಕಾಸು ಸೇವೆಗಳ ಇಲಾಖೆ, ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಜಿಲ್ಲಾ ಪಂಚಾಯತಿಯ ಸಹಯೋಗದಲ್ಲಿ ಬೆಳಗಾವಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಜಿಲ್ಲೆಯಾದ್ಯಂತ 779 ಬ್ಯಾಂಕ್ ಶಾಖೆಗಳಲ್ಲಿ ಹಾಗೂ 500 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಆರ್ಥಿಕ ಸಾಕ್ಷರತಾ ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕೆವೈಸಿ (ನೋ ಯುವರ್ ಕಸ್ಟಮರ್) ನಿಮ್ಮ ಗ್ರಾಹಕರನ್ನು ತಿಳಿಯಿರಿ ಎನ್ನುವುದು ಈ ಆರ್ಥಿಕ ಸಪ್ತಾಹದ ವಿಷಯವಾಗಿದೆ. ಅಧಿಕೃತವಾಗಿ ಮಾನ್ಯವಾದ ದಾಖಲಾತಿಗಳ ಬಗ್ಗೆ ವಿಚಾರಗಳು, ಮರು ಕೆವೈಸಿ, ವಿಡಿಯೋ ಕೆವೈಸಿ, ಸೆಂಟ್ರಲ್ ಕೆವೈಸಿ, ಆಧಾರ್ ಓಟಿಪಿ ಹೀಗೆ ಹಲವಾರು ಬ್ಯಾಂಕಿನ ವಿಷಯಗಳ ಬಗ್ಗೆ ಸಪ್ತಾಹದಲ್ಲಿ ಸಾರ್ವಜನಿಕರಿಗೆ ತಿಳಿಸಿಕೊಡಲಾಗುವುದು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಣಕಾಸು ಸಾಕ್ಷರತಾ ಕೇಂದ್ರಗಳು ಹಾಗೂ ಸಿ.ಎಫ್.ಎಲ್.ಸಿ.ಗಳು, ಬ್ಯಾಂಕಿನ ಶಾಖೆಗಳು, ಬ್ಯಾಂಕಿನ ವ್ಯವಹಾರ ಪ್ರತಿನಿಧಿಗಳು (ಬಿ.ಸಿ.) ಶಿಬಿರವನ್ನು ಏರ್ಪಡಿಸುವ ಮೂಲಕ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲಿದ್ದಾರೆ. ಎಲ್ಲ ಬ್ಯಾಂಕುಗಳು ಗ್ರಾಹಕರು ಹಾಗೂ ಸಾರ್ವಜನಿಕರು ಸಪ್ತಾಹದ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಹುಲ್ ಶಿಂಧೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಕಾರ್ಯಾಲಯದ ಆವರಣದಲ್ಲಿ ಆರ್ಥಿಕ ಸಾಕ್ಷರತಾ ಸಪ್ತಾಹ ಕಾರ್ಯಕ್ರಮದ ಪ್ರಚಾರ ಭಾಗವಾಗಿ ಅಳವಡಿಸಿರುವ ಸೆಲ್ಫಿ ಪಾಯಿಂಟ್ (ಸೆಲ್ಫಿ ಸ್ಟ್ಯಾಂಡ್) ಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಪಂ ಯೋಜನಾ ನಿರ್ದೇಶಕ (ಡಿ.ಆರ್.ಡಿ.ಎ) ರವಿ ಬಂಗಾರೆಪ್ಪನವರ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ಪ್ರಬಂಧಕ ಪ್ರಶಾಂತ ಘೋಡಕೆ, ಎನ್.ಐ.ಸಿ. (ಐಟಿ) ಬೆಳಗಾವಿ ನಿರ್ದೇಶಕ ಶ್ರೀಶ ಕಡಗದಕೈ ಸೇರಿದಂತೆ ಎಲ್ಲ ಬ್ಯಾಂಕ್ ಗಳ ಪ್ರತಿನಿಧಿಗಳು ಹಾಗೂ ಇನ್ನಿತರರು ಭಾಗವಹಿಸಿದ್ದರು.














