ಬೆಳಗಾವಿ: ಗ್ರಾಮೀಣ ಭಾಗದ ಸ್ವಸಹಾಯ ಸಂಘದ ಮಹಿಳೆಯರಿಗೆ ಸ್ವ ಉದ್ಯೋಗ ಒದಗಿಸಲು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಸ್ವಸಹಾಯ ಸಂಘದ ಮಹಿಳೆಯರ ಆರ್ಥಿಕ ಏಳ್ಗೆಗೆ ನೆರವಾಗುವ ನಿಟ್ಟಿನಲ್ಲಿ ಕುಕ್ಕುಟ ಸಂಜೀವಿನಿ ಯೋಜನೆಯಡಿ ಸ್ವಸಹಾಯ ಸಂಘದ ಮಹಿಳೆಯರಿಂದ ಪ್ರತಿ ತಾಲೂಕಿಗೆ ಎರಡು ಕೋಳಿ ಶೆಡ್ ನಿರ್ವಹಿಸಲು ಕ್ರಮಕೈಗೊಳ್ಳಿ ಎಂದು ಸೂಚಿಸಿದರು.
ಮೀನುಗಳ ಸಾಕಾಣಿಕೆಗೆ ಕ್ರಮವಹಿಸಿ:
ಸ್ವಸಹಾಯ ಸಂಘದ ಮಹಿಳೆಯರಿಗೆ ಮೀನುಗಳ ಸಾಕಾಣಿಕೆ ಕುರಿತು ತರಬೇತಿ ನೀಡಿ, ಮುಂಬರುವ ಮಳೆಗಾಲದ ಸಂದರ್ಭದಲ್ಲಿ ಕೆರೆಗಳಲ್ಲಿ ಸ್ವಸಹಾಯ ಸಂಘದಿಂದ ಮೀನುಗಳನ್ನು ಬಿಟ್ಟು ಮೀನುಗಳ ಸಾಕಾಣಿಕೆಯನ್ನು ಆರಂಭಿಸಿ, ನಂತರ ಮೀನುಗಳ ಮಾರಾಟದಿಂದ ಸಂಘಗಳಿಗೆ ಆರ್ಥಿಕ ಬಲ ತುಂಬಿದಂತಾಗಲಿದೆ ಎಂದು ಹೇಳಿದರು.
ಆರ್ಥಿಕ ಏಳ್ಗೆ ಹೊಂದಲು ನೆರವಾಗಿ:
ಸಮಗ್ರ ಕೃಷಿ ಸಮೂಹ, ಲಕ್ ಪತಿ ದೀದಿ, ವನಧನ ವಿಕಾಸ ಕೇಂದ್ರ ಹಾಗೂ ಇನ್ನಿತರೇ ಕಾರ್ಯಕ್ರಮಗಳಡಿ ಸ್ವಸಹಾಯ ಸಂಘದ ಮಹಿಳೆಯರಿಗೆ ಉದ್ಯೋಗ ಒದಗಿಸಿ, ಆರ್ಥಿಕ ಏಳ್ಗೆ ಹೊಂದಲು ನೆರವಾಗಬೇಕು ಎಂದು ತಿಳಿಸಿದರು.
ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ್, ಸಹಾಯಕ ಯೋಜನಾಧಿಕಾರಿ ಭಾಗ್ಯಶ್ರೀ ಜಹಾಗೀರದಾರ, ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಎಲ್ಲ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಯೋಜನೆಯ ಜಿಪಂ, ತಾಪಂ ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.















