ಬೆಂಗಳೂರು: ಜಿಬಿಎ ಪ್ರಸಕ್ತ ಆರ್ಥಿಕ ವರ್ಷದಲ್ಲಿ 6500 ಕೋಟಿ ಅಸ್ತಿ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ವಿವಿಧ ಕ್ರಮಗಳ ಜಾರಿಗೆ ಮುಂದಾಗಿದ್ದು, ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ವಾಣಿಜ್ಯ ಸ್ವತ್ತುಗಳಿಗೆ, ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ಮಾಲೀಕರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಈಗಾಗಲೇ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಿ, ಪಾವತಿಸದಿದ್ದರೆ ಸೀಲ್ ಮಾಡಿ ಎಂದು ಆಯುಕ್ತ ರಾಜೇಂದ್ರ ಚೋಳನ್ ಸೂಚಿಸಿದ್ದು, ಇದಾಗಿ ಎರಡು ದಿನಗಳಲ್ಲಿ ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ.ಕೆ.ವಿ ರಾಜೇಂದ್ರ ಅವರು ವಾಣಿಜ್ಯ ಸ್ವತ್ತುಗಳ ಕಂದಾಯ ಪರಿವೀಕ್ಷಣೆ ನಡೆಸುವಂತೆ ನಿರ್ದೇಶಿಸಿದ್ದಾರೆ.
ಮುಖ್ಯವಾಗಿ ಶನಿವಾರ ಪಶ್ಚಿಮ ನಗರ ಪಾಲಿಕೆಯ ಮಲ್ಲೇಶ್ವರ ವಿಭಾಗದ ಮಾರ್ಗೋಸ ರಸ್ತೆೆಯಲ್ಲಿ ವಸತಿಯೇತರ (ವಾಣಿಜ್ಯ) ಸ್ವತ್ತುಗಳ ಕಂದಾಯ ಪರಿಷ್ಕರಣೆ ಅಭಿಯಾನ ನಡೆಯುತ್ತಿರುವ ಸ್ಥಳಕ್ಕೆೆ ಡಾ.ಕೆ.ವಿ ರಾಜೇಂದ್ರ ಭೇಟಿ ನೀಡಿ ಅಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದಾರೆ, ಮಾರ್ಗೋಸ ರಸ್ತೆೆಯ ವಾಣಿಜ್ಯ ಸ್ವತ್ತುಗಳ ಮಾಲೀಕರು ಸ್ವಂತ ಬಳಕೆ ಎಂದು ಸೂಚಿಸಿ ಬಾಡಿಗೆಗೆ ನೀಡಿರುವುದು, ಖಾಲಿ ಜಾಗಗಳನ್ನು ಕಾರು ನಿಲುಗಡೆ ಹಾಗೂ ಇತರೆ ವಾಣಿಜ್ಯ ಚಟುವಟಿಕೆಗಳಿಗೆ ಬಳಸುತ್ತಿರುವುದು, ಎಸ್.ಎ.ಎಸ್ (ಸ್ವಯಂ ಮೌಲ್ಯಮಾಪನ ವ್ಯವಸ್ಥೆೆ) ಪ್ರಕಾರ ಆಸ್ತಿ ತೆರಿಗೆ ಪಾವತಿಸುತ್ತಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ.
ಆಸ್ತಿ ಮಾಲೀಕರು ಎಸ್.ಎ.ಎಸ್ ಮೂಲಕ ಸ್ವತ್ತುಗಳ ವಿವರಗಳನ್ನು ಕಡಿಮೆ ತೋರಿಸಿ ಆಸ್ತಿ ತೆರಿಗೆ ಪಾವತಿಸಿರುವ ಪ್ರಕರಣಗಳನ್ನು ಪರಿಶೀಲಿಸಿದರು. ಕಂದಾಯ ಪರಿಷ್ಕರಣೆ ನಡೆಸಿ ನಿಗದಿತ ತೆರಿಗೆಯನ್ನು ವಸೂಲಿ ಮಾಡಬೇಕು ಎಂದು ತಿಳಿಸಿದರು. ಖಾಲಿ ಸ್ವತ್ತುಗಳನ್ನು ವಸತಿಯೇತರವಾಗಿ, ಅಂದರೆ ಖಾಸಗಿ ವಾಹನ ನಿಲುಗಡೆ ಸೇರಿದಂತೆ ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವಲ್ಲಿ ಅದರ ಅನುಸಾರ ತೆರಿಗೆ ಪಾವತಿಸುತ್ತಿರುವುದನ್ನು ಪರಿಶೀಲಿಸಲು ಹಾಗೂ ನೆಲಮಹಡಿ ಪ್ರದೇಶವನ್ನು ಯಾವ ಉದ್ದೇಶಕ್ಕಾಾಗಿ ಬಳಸಲು ನಕ್ಷೆ ಮಂಜೂರಾತಿ ಪಡೆದಿದ್ದಾರೆ ಎಂಬುದನ್ನೂ ಪರಿಶೀಲಿಸಲು ಡಾ.ಕೆ.ವಿ ರಾಜೇಂದ್ರ ಅಧಿಕಾರಿಗಳಿಗೆ ಹೇಳಿದರು.
ತೆರಿಗೆ ಬಾಕಿ ಪಾವತಿಸಿ, ಕ್ರಮದಿಂದ ತಪ್ಪಿಸಿಕೊಳ್ಳಿ:
ಬೆಂಗಳೂರಿನ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಹಂತ ಹಂತವಾಗಿ ಮನೆ ಹಾಗೂ ವಾಣಿಜ್ಯ ಸತ್ತುಗಳ ಆಸ್ತಿ ತೆರಿಗೆ ವಸೂಲಾತಿಗೆ ಸೂಕ್ತ ಕ್ರಮ ಜರುಗಿಸಲಾಗುತ್ತಿದ್ದು, ಯಾರೆಲ್ಲ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದೀರಿ ಅವರೆಲ್ಲ ನಿಗದಿತ ಸಮಯದೊಳಗೆ ಪಾವತಿಸಿದರೆ ಕ್ರಮಕ್ಕೆೆ ಒಳಗಾಗುವುದು ತಪ್ಪಲಿದೆ ಎಂದು ಜಿಬಿಎ ಪ್ರಕಟಣೆ ಹೊರಡಿಸಿದೆ.














