ಬೆಂಗಳೂರು: ಸ್ವಚ್ಛತೆ ಎಂಬುದು ಕೇವಲ ಮನೆ, ಬೀದಿ ಅಥವಾ ಸುತ್ತಮುತ್ತಲಿನ ಪರಿಸರದ ಶುಚಿತ್ವಕ್ಕೆ ಮಾತ್ರ ಸೀಮಿತವಾಗಬಾರದು. ಅದರಾಚೆಗೆ ಪ್ರತಿಯೊಬ್ಬರ ತನು, ಮನ, ಗಳಿಸುವ ಧನ ಹಾಗೂ ಇಡೀ ರಾಜಕೀಯ ವಾತಾವರಣವೂ ಸ್ವಚ್ಛವಾಗಬೇಕು. ಇದು ಇಂದಿನ ತುರ್ತು ಅಗತ್ಯ ಕೂಡ ಆಗಿದೆ ಎಂದು ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯ ಅಭಿಪ್ರಾಯಪಟ್ಟರು.
ಶುಕ್ರವಾರ ಸಿ.ಪಿ.ಆರ್.ಐ ವತಿಯಿಂದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಶ್ವಥನಗರದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ದೇಶದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಅಂಗವಾಗಿ ಆಯೋಜಿಸಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗಾಂಧಿ ಜಯಂತಿಯನ್ನು ಸ್ವಚ್ಛತಾ ದಿವಸವನ್ನಾಗಿ ಆಚರಿಸಲು ಕರೆ ನೀಡುವ ಮೂಲಕ ದೇಶಾದ್ಯಂತ ಸ್ವಚ್ಛತೆಯ ಜಾಗೃತಿ ಅಲೆ ಮೂಡಿಸಿದ್ದಾರೆ. ಕರೆಗೆ ಸ್ಪಂದಿಸಿ ವಾಯು ಮಾಲಿನ್ಯ ನಿಯಂತ್ರಣ, ಸೌರಶಕ್ತಿ ಹಾಗೂ ಪರಿಸರ ಸಂರಕ್ಷಣೆಯ ಕ್ಷೇತ್ರದಲ್ಲಿ ಸಿಪಿಆರ್ಐ ನಂತಹ ಸಂಸ್ಥೆಗಳು ಶ್ಲಾಘನೀಯ ಕೆಲಸ ಮಾಡುತ್ತಿವೆ. ಆದರೆ ಪ್ರಸ್ತುತ ದಿನಗಳಲ್ಲಿ ಪರಿಸರ ಮಾಲಿನ್ಯದಷ್ಟೇ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದ್ದು, ಜಾತಿ-ಮತಗಳ ಭೇದಭಾವ ತೊರೆದು ರಾಜಕೀಯ ಮಾಲಿನ್ಯವನ್ನು ನಿಯಂತ್ರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪ್ರತಿಪಾದಿಸಿದರು.
ದೇಶದ ಅಭಿವೃದ್ಧಿ ಹಾಗೂ ಸ್ವಚ್ಛತಾ ಅಭಿಯಾನದಲ್ಲಿ ಮಹಿಳಾ ಶಕ್ತಿಯ ಪಾತ್ರ ಅತ್ಯಂತ ಪ್ರಮುಖವಾದದ್ದು. ಪ್ರಧಾನಮಂತ್ರಿಯವರು ಮಹಿಳೆಯರಿಗೆ ದೇಶದ ರಕ್ಷಣೆ ಮತ್ತು ಹಣಕಾಸಿನಂತಹ ಉನ್ನತ ಸಚಿವಾಲಯಗಳ ಜವಾಬ್ದಾರಿ ನೀಡುವ ಮೂಲಕ ನಾರಿ ಶಕ್ತಿಗೆ ಸೂಕ್ತ ಗೌರವ ನೀಡಿದ್ದಾರೆ. ನಾರಿ ಶಕ್ತಿ ಮತ್ತು ಪೌರಕಾರ್ಮಿಕರು ಕೈಜೋಡಿಸಿದರೆ ಸ್ವಚ್ಛ ಭಾರತದ ಕನಸು ಇನ್ನಷ್ಟು ವೇಗವಾಗಿ ನನಸಾಗಲಿದೆ. ನಾನು ರಾಜಕೀಯದಲ್ಲಿದ್ದಷ್ಟು ದಿನವೂ ಸ್ವಚ್ಛತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿಕೊಂಡು ಬಂದಿದ್ದು, ಮುಂದೆಯೂ ಸಮಾಜದ ಕಲುಷಿತ ವಾತಾವರಣವನ್ನು ತಿದ್ದಲು ಶ್ರಮಿಸುತ್ತೇನೆ ಎಂದರು.
ಸಿ.ಪಿ.ಆರ್.ಐ ಡೈರೆಕ್ಟರ್ ಜನರಲ್ ಶ್ರೀದೇವಿ ಅವರು ಮಾತನಾಡಿ, ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆಯು 2014 ರಿಂದಲೂ ಶೂನ್ಯ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಸಕ್ರಿಯವಾಗಿ ಜಾರಿಗೆ ತಂದಿದೆ. ಸಂಸ್ಥೆಯ ಆವರಣದಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೆರೆ ಮತ್ತು ಅಂತರ್ಜಲ ಮರುಪೂರಣ ವ್ಯವಸ್ಥೆಯನ್ನು ನಿರ್ಮಿಸಲಾಗಿದ್ದು, ಹಸಿತ್ಯಾಜ್ಯ ಸಂಸ್ಕರಣಾ ಘಟಕವನ್ನು ಸಹ ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ. ಸಂಸ್ಥೆಯ ಸುತ್ತಮುತ್ತಲಿನ ಪ್ರದೇಶಗಳಾದ ರಾಮಯ್ಯ ಬಡಾವಣೆ ಹಾಗೂ ಆರ್ಎಂವಿ ಬಡಾವಣೆಗಳಲ್ಲಿ ಅನೇಕ ಸ್ವಚ್ಛತಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಭಾಗವಾಗಿ ಅಂಗನವಾಡಿಗಳ ನವೀಕರಣ, ಶೌಚಾಲಯ ನಿರ್ಮಾಣ, ವಿದ್ಯಾರಣ್ಯಪುರ ಬಸ್ ನಿಲ್ದಾಣದ ಶೌಚಾಲಯಗಳ ದುರಸ್ತಿ, ಮತ್ತಿಕೇರಿಯ ಓಂಶಕ್ತಿ ಪಾಯಿಂಟ್ ಸ್ವಚ್ಛಗೊಳಿಸುವಿಕೆ ಮತ್ತು ಕೆಪಿಎಸ್ ಶಾಲಾ ಶೌಚಾಲಯಗಳ ರಿಪೇರಿ ಕಾರ್ಯಗಳನ್ನು ಸಂಸ್ಥೆಯು ಪೂರ್ಣಗೊಳಿಸಿದೆ ಎಂದು ಮಾಹಿತಿ ನೀಡಿದರು.
ಅರಮನೆನಗರ ವಾರ್ಡಿನ ಮಾಜಿ ಪಾಲಿಕೆ ಸದಸ್ಯೆ ಸುಮಂಗಲ ಅವರು ಮಾತನಾಡಿ, ಪರಿಸರ ಸ್ವಚ್ಛತೆಯು ಕೇವಲ ಪೌರಕಾರ್ಮಿಕರ ಜವಾಬ್ದಾರಿಯಷ್ಟೇ ಅಲ್ಲ, ಅದು ಸಾರ್ವಜನಿಕರ ಕರ್ತವ್ಯವೂ ಆಗಿದೆ. ಪ್ರತಿಯೊಬ್ಬ ಸಾರ್ವಜನಿಕರೂ ತಮ್ಮ ಮನೆಗಳಲ್ಲಿಯೇ ಹಸಿ ಮತ್ತು ಒಣ ಕಸವನ್ನು ಕಡ್ಡಾಯವಾಗಿ ವಿಂಗಡಿಸಿ ಪೌರಕಾರ್ಮಿಕರಿಗೆ ನೀಡಬೇಕು. ರಸ್ತೆಬದಿಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸ ಚೆಲ್ಲಿ ಬ್ಲಾಕ್ ಸ್ಪಾಟ್ಗಳನ್ನು ನಿರ್ಮಿಸುವುದು ತಪ್ಪಾಗಿದ್ದು, ಈ ನಿಟ್ಟಿನಲ್ಲಿ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಪೌರಕಾರ್ಮಿಕರಿಗೆ ಸ್ವಚ್ಛತಾ ಕಿಟ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಆರ್.ಎಂ.ವಿ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀರಾಮ್ ಬಾಷ್ಯಂ, ಪೂಜಾರಿ ಲೇಔಟ್ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಕೆ.ವಿ ರಾಜು, ಸಿ.ಪಿ.ಆರ್.ಐ ಜಂಟಿ ನಿರ್ದೇಶಕ ಕೆ. ಸೂರ್ಯನಾರಾಯಣ, ಸಮಾಜ ಸೇವಕರಾದ ಕೇಶವ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.















