ಬೆಂಗಳೂರು/ಬೆಳಗಾವಿ: ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಆರೋಪದ ಮೇರೆಗೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಅಧಿಕಾರಿಗಳು ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1 ರಂದು ರಾಜ್ಯದ ವಿವಿಧೆಡೆ ಮಹತ್ವದ ದಾಳಿಗಳನ್ನು ನಡೆಸಿದ್ದಾರೆ.
ಬೆಂಗಳೂರು ನಗರ-2 ಹಾಗೂ ಬೆಳಗಾವಿ-2 ವಿಭಾಗದ ಲೋಕಾಯುಕ್ತ ಪೊಲೀಸರು ಒಟ್ಟು 4 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸುರೇಶ್ ರಾಮು ಮುಂಜೆ, ತಹಶೀಲ್ದಾರ್ (ಗ್ರೇಡ್-1), ತಹಶೀಲ್ದಾರ್ ಕಚೇರಿ, ನಿಪ್ಪಾಣಿ (ಬೆಳಗಾವಿ ಜಿಲ್ಲೆ) ಇವರಿಗೆ ಸೇರಿದ ಒಟ್ಟು 9 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧನಾ ಕಾರ್ಯ ನಡೆಸಿದ್ದಾರೆ. ಈ ವೇಳೆ ನಿವೇಶನಗಳು, ವಾಸದ ಮನೆಗಳು, ಕೃಷಿ ಜಮೀನು ಹಾಗೂ ಕಾರ್ಖಾನೆಯಂತಹ ಸ್ಥಿರ ಆಸ್ತಿಗಳು ಪತ್ತೆಯಾಗಿವೆ. ಇದರೊಂದಿಗೆ ನಗದು, ಚಿನ್ನಾಭರಣಗಳು, ವಾಹನಗಳು ಹಾಗೂ ಇತರೆ ಚರಾಸ್ತಿಗಳನ್ನು ಹೊಂದಿರುವುದು ಕಂಡುಬಂದಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಬಗ್ಗೆ ತನಿಖೆ ಮುಂದುವರಿದಿದೆ.
ರಾಜೇಶ್ ಚನ್ನಪ್ಪ ಮಿಶ್ರಿಕೋಟಿ, ಉಪ ನಿರ್ದೇಶಕರು, ಕಾರ್ಖಾನೆಗಳು ವಿಭಾಗ-01, ಮಂಗಳೂರು ಇವರಿಗೆ ಸೇರಿದ ಒಟ್ಟು 9 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಸ್ಥಿರ ಮತ್ತು ಚರಾಸ್ತಿಗಳಾದ ನಗದು, ಚಿನ್ನಾಭರಣ, ವಜ್ರಾಭರಣ, ವಾಹನಗಳು ಮತ್ತು ನಿಶ್ಚಿತ ಠೇವಣಿಗಳನ್ನು ಹೊಂದಿರುವುದು ಪತ್ತೆಯಾಗಿದೆ. ಮಂಟೇಸ್ವಾಮಿ, ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯಾಜ್ಯಗಳ ಇಲಾಖೆ, ಮೈಸೂರು ಇವರಿಗೆ ಸಂಬಂಧಿಸಿದ ಒಟ್ಟು 8 ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದ್ದು, ಅಕ್ರಮವಾಗಿ ಸ್ಥಿರ ಹಾಗೂ ಚರಾಸ್ತಿಗಳನ್ನು ಸಂಪಾದಿಸಿರುವುದು ಕಂಡುಬಂದಿದೆ.
ಹರಿಶಿಲ್ಪ ಜಿ.ಆರ್. (ಕೆ.ಎ.ಎಸ್), ವಿಶೇಷ ಭೂ ಸ್ವಾಧೀನಾಧಿಕಾರಿ-02, ಬೆಂಗಳೂರು/ಚಿಕ್ಕಬಳ್ಳಾಪುರ ವ್ಯಾಪ್ತಿಗೆ ಸಂಬಂಧಿಸಿದ ಹಾಗೂ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರ ಒಟ್ಟು 9 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ಎಲ್ಲಾ ಅಧಿಕಾರಿಗಳು ತಮ್ಮ ಸೇವಾ ಅವಧಿಯಲ್ಲಿ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಆಸ್ತಿಯನ್ನು ಸಂಪಾದಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಲೋಕಾಯುಕ್ತ ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.















