ಬೆಂಗಳೂರು: ಮಹಿಳಾ ಉದ್ಯಮಿಗಳು ಕೇವಲ ಉದ್ಯೋಗಿಗಳಲ್ಲ. ಬದಲಾಗಿ ನೂರಾರು ಜನರಿಗೆ ಉದ್ಯೋಗಗಳನ್ನು ಸೃಷ್ಟಿಸುವವರಾಗಿ ಹೊರಹೊಮ್ಮಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬುಧವಾರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಉಬುಂಟು ಒಕ್ಕೂಟ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ಉದ್ಯತಮಶೀಲತಾ ದಿನದ ನಾಲ್ಕನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉದ್ಯಮಿಗಳು ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಇದರ ಜೊತೆಗೆ ಸರ್ಕಾರದ ನಿರಂತರ ಬೆಂಬಲವನ್ನು ಪಡೆಯಬೇಕು. ಮೊದಲು ಉದ್ಯೋಗಗಳಿಗಿಂತ ಉದ್ಯೋಗದಾತಯರನ್ನು ನೋಡಬೇಕು. ಈ ನಿಟ್ಟಿನಲ್ಲಿ ಮಹಿಳಾ ಉದ್ಯಮಿಗಳು ಕೈಗಾರಿಕೆಗಳು ಮತ್ತು ಜೀವನೋಪಾಯವನ್ನು ನಿರ್ಮಿಸಲು ಸಹಾಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಉಬುಂಟು ಒಕ್ಕೂಟದ ಸಹಯೋಗದ ಧೆಯವಾಕ್ಯವನ್ನು ಉಲ್ಲೇಖಿಸಿದ ಅವರು, ಒಟ್ಟಿಗೆ ಸೇರುವುದು ಒಂದು ಆರಂಭ, ಒಟ್ಟಿಗೆ ಯೋಚಿಸಿಸುವುದು ಯಶಸ್ಸು ಎನ್ನುವುದು ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ವ್ಯವಹಾರದಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಬಲಪಡಿಸುವ ಮಾರ್ಗಗಳನ್ನು ಸೂಚಿಸಬೇಕು ಎಂದು ಮಹಿಳಾ ಉದ್ಯಮಿಗಳಿಗೆ ಕರೆ ನೀಡಿದರು.
ಐಟಿ ವಲಯದಲ್ಲಿ ಶೇ. 50ರಷ್ಟು ಇಂಜಿನಿಯರ್‌ಗಳು ಮತ್ತು ರಾಜ್ಯದಲ್ಲಿ ಶೇ.37 ರಷ್ಟು ವೈದ್ಯರು ಮಹಿಳೆಯರಾಗಿದ್ದರೆ. ಪ್ಯಾರಾಮೆಡಿಕಲ್ ಕೆಲಸಗಾರರಲ್ಲಿ ಶೇ. 80 ರಷ್ಟು ಮಹಿಳೆಯರು ಮತ್ತು ಹೋಟೆಲ್ ಉದ್ಯಮದ ಉದ್ಯೋಗಿಗಳಲ್ಲಿ ಶೇ.60 ರಷ್ಟು ಮಹಿಳೆಯರು ಇದ್ದಾರೆ ಎಂದು ಮಾಹಿತಿ ನೀಡಿದರು.
ಸಣ್ಣ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ರಾಜ್ಯ ಸರ್ಕಾರವು ಶೀಘ್ರದಲ್ಲೇ ವಿಶೇಷವಾದ ಎಂಎಸ್‌ಎಂಇ ನೀತಿಯನ್ನು ಪರಿಚಯಿಸಲಿದೆ. ಅಲ್ಲಿ ದೃಢವಾದ ಮಹಿಳಾ ಕೇಂದ್ರಿತ ಕೈಗಾರಿಕಾ ನೀತಿಯನ್ನು ತರಲು ಉಬುಂಟು ಒಕ್ಕೂಟದಿಂದ ಶಿಫಾರಸ್ಸುಗಳನ್ನು ಪಡೆಯುತ್ತೇವೆ. ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಉದ್ಯಮಿಗಳನ್ನು ತಲುಪುವಲ್ಲಿ ಉಬುಂಟುವಿನ ಪ್ರಯತ್ನಗಳು ಸಮಗ್ರ ಬೆಳವಣಿಗೆಯ ಕಡೆಗೆ ಬಲವಾದ ಬದ್ಧತೆಯನ್ನು ತೋರಿಸುತ್ತವೆ ಎಂದು ಶ್ಲಾಘಿಸಿದರು.
ಉಬುಂಟು ಸ್ಥಾಪಕ ಅಧ್ಯಕ್ಷೆ ಕೆ. ರತ್ನಪ್ರಭಾ ಮಾತನಾಡಿ, ಒಕ್ಕೂಟವು ರಾಜ್ಯಾದ್ಯಂತ ಮಹಿಳೆಯರನ್ನು ಸಬಲೀಕರಣಗೊಳಿಸುವ ಪ್ರಬಲ ಜಾಲವಾಗಿ ಬೆಳೆದಿದೆ ಉಬುಂಟು ಅನ್ನು ಒಬ್ಬರನ್ನೊಬ್ಬರು ಬೆಂಬಲಿಸುವ ಮಹಿಳಾ ಬ್ಯಾಂಕಿನಂತೆ ಅಭಿವೃದ್ಧಿಪಡಿಸಬಹುದು. ಉಬುಂಟು ಮೂಲಕ ಹಂಚಿಕೊಳ್ಳಲು, ತಾಳ್ಮೆಯಿಂದಿರಲು, ಸಹಿಷ್ಣುವಾಗಿರಲು ಮತ್ತು ಇತರರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಕಲಿತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್‌ನ ದಕ್ಷಿಣ ವಿಭಾಗದ ಮಾರಾಟ ಮತ್ತು ಮಾರುಕಟ್ಟೆ ಸಹಾಯಕ ಉಪಾಧ್ಯಕ್ಷ ಸಂಜಯ್ ಅಲ್ಮೇಲ್ಕರ್, ವಾಷಿಂಗ್‌ಟನ್ ಡಿಸಿಯ ಗ್ಲೊಬಲ್ ಎಕನಾಮಿಸ್ಟ್‌ನ ಅಧ್ಯಕ್ಷ ವಿನಯ್ ಬಂಟು ಸೇರಿದಂತೆ ಮುಂತಾದವರಿದ್ದರು.
ಮಹಿಳಾ ಸಾಧಕರಿಗೆ ಪ್ರಶಸ್ತಿ:
ಪ್ರತಿಷ್ಠಿತ ಉದ್ಯಮಿ ವಿಕಾಸಿನಿ ಜೀವಮಾನ ಸಾ‘ನೆ ಪ್ರಶಸ್ತಿಯನ್ನು ಎಫ್.ಕೆ.ಸಿ.ಸಿ. ಐ ಮೊದಲ ಮಹಿಳಾ ಅಧ್ಯಕ್ಷೆ ಉಮಾ ರೆಡ್ಡಿ ಮತ್ತು ಗೋವಾದ ಜಿಸಿಸಿಐನ ಮಹಿಳಾ ಅಧ್ಯಕ್ಷೆ ಪ್ರತಿಮಾ ಧೋಂಡ್ ಅವರಿಗೆ ಪ್ರದಾನ ಮಾಡಲಾಯಿತು. ಹಿಡನ್ ಉಬುಂಟು ಜೆಮ್ಸ್ ಪ್ರಶಸ್ತಿಯನ್ನು ಬೆಳಗಾವಿಯ ರವೀಂದ್ರ ಎನರ್ಜಿ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷೆ ವಿದ್ಯಾ ಎಂ. ಮುರ್ಕುಂಬಿ, ಟ್ಯಾಕ್ಸಿ ಸರ್ವೀಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕಿ ವಂದನಾ ಸೂರಿ, ಪಮ್ಮಿ ಫುಡ್ಸ್ ನಿರ್ದೇಶಕಿ ಪ್ರಮೋದಿನಿ ನಾಗರಾಜು, ವುಮೆನ್ ಆಟೋ ಟೈಗರ್ಸ್ ಅಸೋಸಿಯೇಷನ್‌ನ ಸಂಸ್ಥಾಪಕಿ ನೂರ್ ಜಹಾನ್ ಅವರಿಗೆ ನೀಡಲಾಯಿತು. ಇದರೊಂದಿಗೆ ಒಟ್ಟು 27 ಮಹಿಳಾ ಉದ್ಯಮಿಗಳಿಗೆ ಉಬುಂಟು ಸ್ಟಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.















