ಬೆಂಗಳೂರು: ಮೂಟ್ ಕೋರ್ಟ್ ತುಂಬಾ ಒಳ್ಳೆಯ ವಿಷಯವಾಗಿದೆ. ನಿಜವಾದ ಕೋರ್ಟ್ ಕಾರ್ಯಕಲಾಪಗಳನ್ನು ಇಲ್ಲಿಯೇ ಅಭ್ಯಸಿಸಿ ವಿದ್ಯಾರ್ಥಿಗಳು ಕಾರ್ಯರೂಪಕ್ಕೆ ತರಬಹುದಾಗಿದೆ. ಮೊದಲೆಲ್ಲ ಈ ಪ್ರಾಯೋಗಿಕ ಕೋರ್ಟ್ ವ್ಯವಸ್ಥೆ ಇರಲಿಲ್ಲ ಆದರೆ ಈಗ ಅದನ್ನು ಕಾನೂನು ವಿಶ್ವವಿದ್ಯಾಲಯದ ವತಿಯಿಂದಲೇ ಕಡ್ಡಾಯಗೊಳಿಸುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಸಿ.ಎಂ.ಆರ್ ವಿಶ್ವವಿದ್ಯಾಲಯದ ಡೀನ್ ಹಾಗೂ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಟಿ ಆರ್ ಸುಬ್ರಮಣ್ಯ ಅಭಿಪ್ರಾಯಪಟ್ಟರು.
ಶುಕ್ರವಾರ ಬಿ.ಎಂ.ಎಸ್ ಲಾ ಕಾಲೇಜು ಆಯೋಜಿಸಿದ್ದ 11 ನೇ ಬಿ.ಎಂ ಶ್ರೀನಿವಾಸಯ್ಯ ಮೂಟ್ ಕೋರ್ಟ್ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೂಟ್ ಕೋರ್ಟ್ ಸ್ಪರ್ಧೆಗಳಲ್ಲಿ ಗೌರವ, ಸತ್ಯವಂತಿಕೆ ಮತ್ತು ಮಾನವೀಯತೆಯ ಸಂಗತಿಗಳನ್ನು ಗಮನವಿಟ್ಟುಕೊಳ್ಳಬೇಕು. ಕಾನೂನನ್ನು ಅಭ್ಯಸಿಸುವುದು ಯಾವುದೇ ಯೋಗ ಮತ್ತು ಧ್ಯಾನಕ್ಕಿಂತ ಕಡಿಮೆಯಿಲ್ಲ. ಆದ್ದರಿಂದ ಯಾವುದೇ ಮೋಸಕ್ಕೆ ಆಸ್ಪದ ಕೊಡದೇ ಮೂಟ್ ಕೋರ್ಟ್ ಸ್ಪರ್ಧೆಗಳು ನಡೆಯುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ಮೂಟ್ ಕೋರ್ಟ್ ಸ್ಪರ್ಧೆಗಳು ಅಂತರಾಷ್ಟ್ರೀಯ ಕಾನೂನುಗಳನ್ನು ಸಹ ಅಳವಡಿಸಿಕೊಳ್ಳಬೇಕು. ಜಗತ್ತಿನ ಉತ್ತಮ ಕಾನೂನು ಕ್ರಮಗಳನ್ನು ಸಹ ಅಭ್ಯಸಿಸಿ ಅದನ್ನು ವಾದ ಪ್ರತಿವಾದದ ಸಮಯದಲ್ಲಿ ಮುನ್ನಲೆಗೆ ತರುವುದು ಸಹ ಅತಿ ಮುಖ್ಯ ಅಭ್ಯಾಸಗಳಲ್ಲಿ ಒಂದಾಗಿದೆ ಎಂದು ಟಿ.ಆರ್ ಸುಬ್ರಮಣ್ಯ ತಿಳಿಸಿದರು.
ಎನ್.ಎಸ್.ಎಲ್. ಯು ಮಾಜಿ ಪ್ರಾಧ್ಯಾಪಕ ಡಾ ಎಂ.ಕೆ ರಮೇಶ್ ಮಾತನಾಡಿ, ಮೂಟ್ ಕೋರ್ಟ್ ಸ್ಪರ್ಧೆಗಳು ನೋಡುವುದಕ್ಕೆ ಅತ್ಯಂತ ಸುಲಭ ಎನ್ನುವಂತೆ ಕಂಡುಬಂದರೂ ತುಂಬಾ ಕಠಿಣ ಸ್ಪರ್ಧೆಯಾಗಿದೆ. ಆದರೆ ಇದನ್ನು ಸಂತೋಷದಾಯಕವಾಗಿ ಮತ್ತು ಆನಂದಮಯವಾಗಿ ನಡೆಸಿಕೊಂಡು ಹೋಗುವುದು ಸಹ ಒಂದು ಕೌಶಲ್ಯವಾಗಿದೆ. ಈಗಿನ ವಿದ್ಯಾರ್ಥಿಗಳು ಸಹ ಉತ್ತಮ ವಾಗ್ಮಿಗಳಾಗಿದ್ದು ಸ್ಪರ್ಧೆಯನ್ನು ಜಡ್ಜ್ ಮಾಡುವುದು ಸಹ ಅತ್ಯಂತ ಕಠಿಣ ಕಾರ್ಯಗಳಲ್ಲಿ ಒಂದಾಗಿ ಪರಿಣಮಿಸಿದೆ ಎಂದರು.
ಬಿ.ಎಂ.ಎಸ್.ಸಿ.ಎಲ್ ಅಧ್ಯಕ್ಷ ಅವಿರಾಮ್ ಶರ್ಮ, ಬಿ.ಎಂ.ಎಸ್ ಶಿಕ್ಷಣ ದತ್ತಿಯ ನಿರ್ದೇಶಕರು (ಆಡಳಿತ) ವಿಂಗ್ ಕಮಾಂಡರ್ ರಾಘವನ್ ಬಿ. ಎಂ, ಪ್ರಾಂಶುಪಾಲರಾದ ಪ್ರೊ. (ಡಾ.) ಅನಿತಾ ಎಫ್. ಎನ್. ಡಿಸೋಜಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.














