ಬೆಂಗಳೂರು: ಕೆಲವು ಸುದ್ದಿವಾಹಿನಿಗಳು ಬೆಂಗಳೂರಿನ ನಗರ ಜಿಲ್ಲೆಯಲ್ಲಿ ಅಡುಗೆ ಅನಿಲ ಏಪ್ರಿಲ್ 23 ರವರೆಗೆ ಕೊರತೆಯಾಗಲಿದೆ ಎನ್ನುವ ಆಧಾರರಹಿತ ಸುದ್ದಿಯನ್ನು ಬಿತ್ತರಗೊಳಿಸುತ್ತಿರುವುದು ಕಂಡುಬಂದಿದೆ. ಪ್ರಸ್ತುತ ಜಿಲ್ಲೆಯಲ್ಲಿ ಅಡುಗೆ ಅನಿಲ ದಾಸ್ತಾನು ಸಾಕಷ್ಟು ಇದ್ದು, ಯಾವುದೇ ಕೊರತೆ ಇಲ್ಲದಂತೆ ಪೂರೈಸಲಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ ಜಗದೀಶ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಭಾನುವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಇಂತಹ ಆಧಾರ ರಹಿತ ವದಂತಿಗಳಿಂದ ಸಾರ್ವಜನಿಕರಲ್ಲಿ ಆತಂಕ ಮೂಡುವ ಸಂಭವವಿದೆ. ಯಾವುದೇ ಅಧಿಕೃತ ಸರ್ಕಾರಿ ಹೇಳಿಕೆಯ ಆಧಾರವಿಲ್ಲದೆ ಸುದ್ದಿವಾಹಿನಿಗಳು ಸುವ್ಯವಸ್ಥೆಗೆ ಅಡ್ಡಿಪಡಿಸುವಂತಹ ಆಧಾರ ರಹಿತ ಸುದ್ದಿಗಳನ್ನು ಬಿತ್ತರಗೊಳಿಸಬಾರದು.ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೋಡಬಾರದು ಎಂದು ಮನವಿ ಮಾಡಿದ್ದಾರೆ.















