ಬೆಂಗಳೂರು: ನಗರದ ಕತ್ರಿಗುಪ್ಪೆ ರಸ್ತೆಯ ವಿದ್ಯಾಪೀಠ ವೃತ್ತದ ಬಳಿಯ ಗಜೇಂದ್ರ ವಿಲಾಸ್ ಹೋಟೆಲ್‌ನಲ್ಲಿ ಶನಿವಾರ ಆರಂಭವಾದ ವಿದ್ಯಾಪೀಠ ಕಾರ್ನರ್ ಫೆಸ್ಟ್-2026 ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಸಂಯೋಜನೆಯಾಗಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಎರಡು ದಿನಗಳ ಉತ್ಸವದ ಮೊದಲ ದಿನ ವಿವಿಧ ಕಾರ್ಯಕ್ರಮಗಳಿಗೆ ನೂರಾರು ಮಂದಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಉತ್ಸವವನ್ನು ಬಸವನಗುಡಿ ಶಾಸಕ ಎಲ್.ಎ. ರವಿ ಸುಬ್ರಹ್ಮಣ್ಯ ಉದ್ಘಾಟಿಸಿದ್ದಾರೆ. ಬಳಿಕ ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ, ಭಗವದ್ಗೀತೆ ಪಾರಾಯಣ, ಶ್ರೀನಿವಾಸ ಕಲ್ಯಾಣ, ಭಜನಾ ಕಾರ್ಯಕ್ರಮ ಸೇರಿದಂತೆ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಧು-ವರರ ಪರಿಚಯ ಸಮ್ಮೇಳನವೂ ಆಯೋಜನೆಯಾಗಿದ್ದು, ಅದನ್ನು ಹಿರಿಯ ಚಲನಚಿತ್ರ ನಟ ಶಂಕರ್ ಭಟ್ ಉದ್ಘಾಟಿಸಿದರು.
ಉತ್ಸವದಲ್ಲಿ ಮಹಿಳಾ ಉದ್ಯಮಿಗಳು ತಮ್ಮ ಕೈಯಿಂದ ತಯಾರಿಸಿದ ಹಾಗೂ ಗೃಹ ನಿರ್ಮಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಸ್ಥಾಪಿಸಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಎನ್ ಯು ಆಸ್ಪತ್ರೆಯಿಂದ ಆರೋಗ್ಯ ತಪಾಸಣಾ ಶಿಬಿರ:
ನಗರದ ಮಿಷನ್ ರಸ್ತೆಯ ಎನ್ ಯು ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಮೂಲ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಹಿರಿಯ ಉಪಾಧ್ಯಕ್ಷ ಹಾಗೂ ಬಿಜೆಪಿ ಹಿರಿಯ ಮುಖಂಡ ಕೆ.ಎನ್. ಚಯಾಪತಿ ಉದ್ಘಾಟಿಸಿದರು. ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯ ನಾಗರಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಈ ಉತ್ಸವವನ್ನು ಕರ್ನಾಟಕ ರಾಜ್ಯ ಡಿಜಿಟಲ್ ನ್ಯೂಸ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಹನುಮೇಶ್ ಕೆ. ಯಾವಗಲ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದೆ. ಎನ್.ಯು ಆಸ್ಪತ್ರೆಯ ಆರೋಗ್ಯ ತಪಾಸಣಾ ಶಿಬಿರದ ನೇತೃತ್ವವನ್ನು ಹೇಮಾ ಮಾಲಿನಿ ಅವರು ವಹಿಸಿದ್ದಾರೆ.
ಇಂದು ಉತ್ಸವದ ಸಮಾರೋಪ:
ಉತ್ಸವದ ಮೊದಲ ದಿನ ಧಾರ್ಮಿಕ, ಆರೋಗ್ಯ ಹಾಗೂ ಸಾಮಾಜಿಕ ಚಟುವಟಿಕೆಗಳು ಜನರನ್ನು ಆಕರ್ಷಿಸಿದ್ದು, ಜೂ.28 ರಂದು ಸಂಗೀತ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6 ಗಂಟೆಗೆ ಶೃತಿ ಎಸ್. ಮತ್ತು ಶ್ವೇತ ಎಸ್. ಅವರಿಂದ ದೇವರನಾಮ ಗಾಯನದ ಮೂಲಕ ಸಮಾರೋಪ ಸಮಾರಂಭ ನಡೆಯಲಿದೆ.














