ಬೆಂಗಳೂರು: ಮಧ್ಯಸ್ಥಿಕೆ ಪ್ರಕ್ರಿಯೆಯು ಯಾವುದೇ ಪಕ್ಷಕ್ಕೂ ಬೇಸರ ಉಂಟುಮಾಡದೆ ನ್ಯಾಯ ಒದಗಿಸುವ ಪರಿಣಾಮಕಾರಿ ವ್ಯವಸ್ಥೆಯಾಗಿದ್ದು, ನ್ಯಾಯಾಂಗದಲ್ಲಿ ಇದರ ಬಳಕೆ ಇನ್ನಷ್ಟು ಹೆಚ್ಚಾಗಬೇಕು ಎಂದು ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಅಭಿಪ್ರಾಯಪಟ್ಟರು.
ಬೆಂಗಳೂರು ಇಂಟರ್‌ನ್ಯಾಷನಲ್ ಮೀಡಿಯೇಷನ್, ಆರ್ಬಿಟ್ರೇಷನ್ ಮತ್ತು ಕಾನ್ಸಿಲಿಯೇಷನ್ ಸೆಂಟರ್ ಹಾಗೂ ಜೈನ್ (ಡೀಮ್ಡ್-ಟು-ಬಿ ಯೂನಿವರ್ಸಿಟಿ) ಸಹಯೋಗದಲ್ಲಿ ಮಧ್ಯಸ್ಥಿಕೆಯ ಎರಡು ದಶಕಗಳು ಸ್ಮರಣಾರ್ಥ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಸಮರ್ಪಣೆ, ವಿಶ್ವಾಸಾರ್ಹತೆ ಹಾಗೂ ಉತ್ಕೃಷ್ಟತೆ ಅಡಕವಾಗಿದ್ದು, ಕಾನೂನು ಜಾರಿಯ ಜತೆಗೆ ಸಮಾಜದಲ್ಲಿ ಸಂವಾದ, ಸಮಾಧಾನ ಮತ್ತು ಸಮನ್ವಯವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಎಲ್ಲರೂ ಒಟ್ಟಾಗಿ ಸಾಗಬೇಕು ಮತ್ತು ಒಂದೇ ಮನೋಭಾವದಿಂದ ಆಲೋಚಿಸಬೇಕು ಎಂಬ ಭಾರತೀಯ ಸಂಸ್ಕೃತಿ ಹಾಗೂ ಮೌಲ್ಯಗಳಿಗೆ ಮಧ್ಯಸ್ಥಿಕೆ ವ್ಯವಸ್ಥೆ ಪೂರಕವಾಗಿದೆ. ನಮ್ಮ ಪ್ರಾಚೀನ ಪಂಚಾಯತ್ ವ್ಯವಸ್ಥೆಯಲ್ಲಿಯೂ ಈ ವ್ಯವಸ್ಥೆಗೆ ಮಹತ್ವದ ಸ್ಥಾನವಿತ್ತು. ವಿವಾದಗಳನ್ನು ಬಗೆಹರಿಸುವುದರ ಜತೆಗೆ ಪರಸ್ಪರ ಸಂಬಂಧಗಳನ್ನು ಉಳಿಸಿಕೊಳ್ಳುವ ಶಕ್ತಿಯೂ ಇದಕ್ಕಿದೆ ಎಂದು ತಿಳಿಸಿದರು.
ಹೊಸ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಹಾಗೂ ಆನ್‌ಲೈನ್ ವಿವಾದ ಪರಿಹಾರ ವ್ಯವಸ್ಥೆಗಳ ಬೆಳವಣಿಗೆಯಿಂದ ಮಧ್ಯಸ್ಥಿಕೆಯ ವ್ಯಾಪ್ತಿ ಮತ್ತಷ್ಟು ವಿಸ್ತರಿಸುತ್ತಿದ್ದು, ತಂತ್ರಜ್ಞಾನದೊಂದಿಗೆ ಮಾನವೀಯ ಸಂವೇದನೆಗಳಿಗೂ ಸಮಾನ ಮಹತ್ವ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಮತ್ತು ಸಂಧಾನ ಕೇಂದ್ರವು ಕಳೆದ ಎರಡು ದಶಕಗಳಿಂದ ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಲ್ಲಿಸಿರುವ ಸೇವೆ ಶ್ಲಾಘನೀಯ, ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ನ್ಯಾಯಶಾಸ್ತ್ರಜ್ಞರು, ಮಧ್ಯವರ್ತಿಗಳು ಹಾಗೂ ಸಹಭಾಗಿತ್ವ ಸಂಸ್ಥೆಗಳ ಪಾತ್ರ ಕೂಡ ದೊಡ್ಡದಿದೆ ಎಂದರು.
ವ್ಯಾಪಾರ, ಕೈಗಾರಿಕೆ, ಬ್ಯಾಂಕಿಂಗ್, ಕೌಟುಂಬಿಕ ವಿವಾದಗಳು, ಆರೋಗ್ಯ, ಶಿಕ್ಷಣ ಹಾಗೂ ಅಂತರರಾಷ್ಟ್ರೀಯ ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಧ್ಯಸ್ಥಿಕೆಯ ಮಹತ್ವ ನಿರಂತರವಾಗಿ ಹೆಚ್ಚುತ್ತಿದ್ದು, ತ್ವರಿತ ಮತ್ತು ಸೌಹಾರ್ದಯುತ ವಿವಾದ ಪರಿಹಾರವು ಹೂಡಿಕೆದಾರರಲ್ಲಿ ವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಆರ್ಥಿಕ ಅಭಿವೃದ್ಧಿಗೂ ಪೂರಕವಾಗುತ್ತದೆ ಎಂದು ಥಾವರ ಚಂದ್ ಗೆಹಲೋತ್ ಹೇಳಿದರು.
ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಹಾಗೂ ಸಿರಿಯಾಕ್ ಜೋಸೆಫ್, ಮುಂಬೈ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್, ಜೈನ್ ವಿವಿ ಕುಲಾಧಿಪತಿ ಡಾ. ಚೆನ್ರಾಜ್ ಜೈನ್ ಸೇರಿದಂತೆ ಇತರರಿದ್ದರು.














