ಬೆಂಗಳೂರು/ಮೈಸೂರು: ಮುಂಬಡ್ತಿ ಪಡೆಯಲು ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕೆಎಎಸ್ ಅಧಿಕಾರಿಯಿಂದ 1.60 ಕೋಟಿ ಲಂಚ ಪಡೆದ ಆರೋಪ ಸಂಬಂಧ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದ ಬೆನ್ನಲೇ ಮಾನಹಾನಿ ಪ್ರಕರಣದಡಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಮಾಜಿ ಆಯುಕ್ತರಾಗಿರುವ ಕೆಎಎಸ್ ಅಧಿಕಾರಿ ಡಿ.ಬಿ.ನಟೇಶ್ ನೀಡಿದ ದೂರು ಆಧರಿಸಿ ಶುಕ್ರವಾರ ಸ್ನೇಹಮಯಿ ಕೃಷ್ಣ ರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದು ಮೈಸೂರಿಲ್ಲಿರುವ ಆರೋಪಿಯ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ತಪಾಸಣೆ ಮಾಡಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಮೂಡಾದಲ್ಲಿ ನಡೆದಿದೆ ಎನ್ನಲಾದ ನಿವೇಶನ ಹಂಚಿಕೆ ಹಗರಣ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುಟುಂಬಸ್ಥರ ವಿರುದ್ಧ ದೂರುದಾರರಾಗಿದ್ದ ಸ್ನೇಹಮಯಿ ಕೃಷ್ಣ, ಎರಡು ದಿನಗಳ ಹಿಂದಷ್ಟೇ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಮುಂಬಡ್ತಿ ಪಡೆಯಲು ನಟೇಶ್, ಮುಖ್ಯ ಕಾರ್ಯದರ್ಶಿಗೆ ಸುಮಾರು 1.60 ಕೋಟಿ ರೂಪಾಯಿ ಲಂಚ ನೀಡಿದ್ದರು ಎಂದು ಆರೋಪಿಸಿ ಇ.ಡಿ. ಹಾಗೂ ಐಟಿಗೆ ದೂರು ನೀಡಿದ್ದರು.
ಕೆಎಎಸ್ ಅಧಿಕಾರಿಯಿಂದ ದೂರು:
ನನ್ನ ಪೋಟೊ, ನಕಲಿ ಆಡಿಯೊ ಹಾಗೂ ದಾಖಲೆ ಸೃಷ್ಟಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಈ ಮೂಲಕ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಸ್ನೇಹಮಯಿ ಕೃಷ್ಣ ವಿರುದ್ಧ ಕೆಎಎಸ್ ಅಧಿಕಾರಿ ಡಿ.ಬಿ.ನಟೇಶ್ ಮಾನಹಾನಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಮೈಸೂರಿನ ಗೌರಿಶಂಕರನಗರದಲ್ಲಿರುವ ಸ್ನೇಹಮಯಿ ಕೃಷ್ಣ ನಿವಾಸ ಹಾಗೂ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆ. ಮತ್ತೊಂದೆಡೆ ಸಿಟಿ ಸಿವಿಲ್ ಕೋರ್ಟ್ ಬಳಿ ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಸ್ನೇಹಮಯಿ ಕೃಷ್ಣ ಅವರ ಪುತ್ರ ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ನೇಹಮಯಿ ಕೃಷ್ಣ ಪುತ್ರ ವಿವೇಕ್, ಪ್ರಕರಣವೊಂದರ ಸಂಬಂಧ ಇಂದು ಮಧ್ಯಾಹ್ನ ಸಿಟಿ ಸಿವಿಲ್ ಕೋರ್ಟ್ ಬಳಿ ಇದ್ದಾಗ ಸಿಸಿಬಿ ಪೊಲೀಸರು ನನ್ನ ತಂದೆಯನ್ನು ಬಂಧಿಸಿದ್ದಾರೆ. ಮುಂಬಡ್ತಿ ಪಡೆಯಲು ಕೆಎಎಸ್ ಅಧಿಕಾರಿ ನಟೇಶ್ ಲಂಚ ಸಂಬಂಧ ಕೆಲದಿನಗಳ ಹಿಂದೆ ಆಡಿಯೊ ಹಾಗೂ ದಾಖಲೆ ಬಿಡುಗಡೆ ಮಾಡಿದ್ದರು. ಈ ಪ್ರಕರಣದಲ್ಲಿ ತಮ್ಮ ತಂದೆಯನ್ನು ಬಂಧಿಸಿದ್ಧಾರೆ ಎಂದು ಮಾಹಿತಿ ನೀಡಿದ್ದಾರೆ.















