ಬೆಂಗಳೂರು: ಜಿಬಿಎ ನೌಕರರ ಭವನ: ದಕ್ಷಿಣ ವಲಯ ಉಪ ಆಯುಕ್ತ ಡಿ.ಕೆ.ಬಾಬು ಮತ್ತು ಕಂದಾಯ ಅಧಿಕಾರಿ ವರಲಕ್ಷ್ಮಿ ಅವರುಗಳನ್ನು ಕಾನೂನು ಬಾಹಿರವಾಗಿ ಅಮಾನತ್ತು ಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದನ್ನು ಖಂಡಿಸಿ ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರ ತುರ್ತು ಸಭೆ ಮತ್ತು ಮೇಣದ ದೀಪ ಹಚ್ಚುವ ಮೂಲಕ ಮೌನ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಮಾತನಾಡಿ, ಉಗುರಿನಲ್ಲಿ ಹೋಗುವದಕ್ಕೆ ಕೊಡಲಿ ತೆಗೆದುಕೊಂಡು ಅಧಿಕಾರಿ, ನೌಕರರನ್ನು ಕಾನೂನು ಬಾಹಿರವಾಗಿ ಮಟ್ಟ ಹಾಕುವುದನ್ನ ಖಂಡಿಸಿ ಮೌನ ಪ್ರತಿಭಟನೆ ನೆಡೆಸಲಾಗುತ್ತಿದೆ. ಕಂದಾಯ ಇಲಾಖೆಗೆ ಕರಾಳ ದಿನವಾಗಿದೆ. ಸಾಂಕೇತಿಕವಾಗಿ ನಮ್ಮ ಹೋರಾಟ ಪ್ರಾರಂಭವಾಗಿದೆ. ಅವೈಜ್ಞಾನಿಕ ಪದ್ದತಿಗಳಿಂದ ಅಧಿಕಾರಿಗಳಿಗೆ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಲೋಕಾಯುಕ್ತ ತನಿಖೆ, ಕೇಸ್ ಗಳು ಇರುತ್ತದೆ. ಅಂತಹ ಖಾತೆಗಳನ್ನು ಮಾಡಿ ಕೊಡಲು ಬರುವುದಿಲ್ಲ. ಸಾವಿರಾರು ಇ-ಖಾತೆ ರದ್ದಾಗಿದೆ ಅದರೆ ಈ ಇಬ್ಬರ ಮೇಲೆ ದ್ವೇಶ ಸಾಧಿಸುವ ಸಲುವಾಗಿ ಅಮಾನತ್ತು ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಖಂಡನೀಯ. ಪ್ರತಿದಿನ ಕಂದಾಯ ಇಲಾಖೆ ಅಧಿಕಾರಿ, ನೌಕರರಿಗೆ ಕಿರುಕುಳ ನೀಡಲಾಗುತ್ತಿದೆ. ಅವೆರೆಲ್ಲ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಜಿಬಿಎ ಪಂಚ ಪಾಲಿಕೆಯಲ್ಲಿ 12ಸಾವಿರ ಹುದ್ದೆಗಳಿಗೆ ನೇಮಕಾತಿ ಆಗಿಲ್ಲ ಎಂದು ಮಾಹಿತಿ ನೀಡಿದರು.
ಕಳೆದ ಮೂರು ವರ್ಷಗಳಿಂದ ಸತತ ಕಿರುಕುಳ ನೀಡಲಾಗುತ್ತಿದೆ. ನಗರದ ಜನರಿಗೆ ತೊಂದರೆಯಾಗಬಾರದು ಎಂದು ಮೌನವಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಇನ್ನು ನಮ್ಮ ತಾಳ್ಮೆ ಪರೀಕ್ಷೆ ಮಾಡಬಾರದು. ರಾಜ್ಯ ಸರ್ಕಾರ, ಉಪಮುಖ್ಯಮಂತ್ರಿಗಳು, ಮುಖ್ಯ ಆಯುಕ್ತರಿಗೆ ಒಳ್ಳೆಯ ಹೆಸರು ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಆದ್ದರಿಂದ ನಮಗೆ ನ್ಯಾಯ ದೊರೆಯಬೇಕು. ಕಾನೂನು ಬಾಹಿರವಾಗಿ ಅಮಾನತ್ತು ಪ್ರಸ್ತಾವನೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ನಮ್ಮ ಬೇಡಿಕೆ ಈಡೇರಿಕೆಗಾಗಿ ಡಿ.23ರಂದು ಕೇಂದ್ರ ಪಾಲಿಕೆ, ಡಿ. 24ರಂದು ದಕ್ಷಿಣ ಪಾಲಿಕೆ, ಡಿ.26ರಂದು ಪಶ್ಚಿಮ ಪಾಲಿಕೆ, ಡಿ.29 ರಂದು ಪೂರ್ವಪಾಲಿಕೆ ಮತ್ತು ಡಿ.30ರಂದು ಉತ್ತರ ಪಾಲಿಕೆಯಲ್ಲಿ ಮೇಣದ ಬತ್ತಿ ಹಚ್ಚಿ ಶಾಂತಿಯುತವಾಗಿ ಒಂದು ನಿಮಿಷ ಪ್ರತಿಭಟನೆ ನಡೆಸಲಾಗುವುದು ಎಂದರು.
ಮೌನ ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳು ಮತ್ತು ನೂರಾರು ಅಧಿಕಾರಿ, ನೌಕರರು ಭಾಗವಹಿಸಿದ್ದರು.














