ಬೆಂಗಳೂರು: ವಕೀಲ ವೃತ್ತಿಯಲ್ಲಿರುವ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಬೇಕು. ಕಕ್ಷಿದಾರರಿಗೆ ನ್ಯಾಯ ಒದಗಿಸುವ ಜೊತೆಗೆ ನ್ಯಾಯಾಲಯ, ಪ್ರತಿವಾದಿ ವಕೀಲರು ಹಾಗೂ ಇತರ ಸಹೋದ್ಯೋಗಿಗಳ ಕುರಿತು ಗೌರವ ಹೊಂದುವುದು ಅತ್ಯಗತ್ಯ ಎಂದು ಹಿರಿಯ ವಕೀಲರಾದ ಕೆ.ಜಿ. ರಾಘವನ್ ತಿಳಿಸಿದರು.
ಶುಕ್ರವಾರ ಸಂಜೆ ಬೆಂಗಳೂರು ವಕೀಲರ ಸಾಹಿತ್ಯ ಕೂಟದ ವತಿಯಿಂದ ಅನುಭವಾಮೃತ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉಪನ್ಯಾಸದ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಅವರು, ನಾವು ಮೊದಲು ನ್ಯಾಯಾಲಯಕ್ಕೆ ಗೌರವ ನೀಡುವುದನ್ನು ಕಲಿಯಬೇಕು. ಎದುರಾಳಿ ವಕೀಲರ ವಾದ-ವಿವಾದಗಳನ್ನು ಯಾವತ್ತೂ ಸಾರಾಸಗಟಾಗಿ ತಿರಸ್ಕರಿಸಬಾರದು. ಕೇಸ್‌ನಲ್ಲಿ ಸೋತರೂ ಅಥವಾ ಗೆದ್ದರೂ ಅವರ ಪಾಯಿಂಟ್‌ಗಳಿಂದ ಕಲಿಯುವುದು ಬಹಳಷ್ಟಿರುತ್ತದೆ. ವಕೀಲರಲ್ಲಿ ಈ ವೃತ್ತಿಪರತೆ ಇಲ್ಲದಿದ್ದರೆ ಕೆಟ್ಟ ಹೆಸರು ಬರುತ್ತದೆ. ಅದರಿಂದ ನ್ಯಾಯಾಲಯಕ್ಕೆ ಮತ್ತು ಅಂತಿಮವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಅಭಿಪ್ರಾಯಿಸಿದರು.
ಇಂದಿನ ಪೀಳಿಗೆಯ ಯುವ ವಕೀಲರು ಅತ್ಯಂತ ಬುದ್ಧಿವಂತರು. ಅವರಿಗೆ ಕಾನೂನು ಓದುವುದು ಅಭ್ಯಸಿಸುವುದು ದೊಡ್ಡ ಮಾತಲ್ಲ. ಆದರೆ ಏನು ಮಾಡಬಾರದು ಎಂಬುದನ್ನು ಹೇಳಿಕೊಡಬೇಕು ಇದು ಹಿರಿಯರ ಜವಾಬ್ದಾರಿಯಾಗಿದೆ. ಕಾನೂನು ಕಾಲೇಜುಗಳ ಮೂಟ್ ಕೋರ್ಟ್ ಸ್ಪರ್ಧೆಗಳಲ್ಲಿ ಕೋರ್ಟ್ ಮ್ಯಾನರ್ಸ್ ಮುಖ್ಯ ವಿವಚಾರವಾಗಬೇಕು. ಒಟ್ಟಿನಲ್ಲಿ ಯಶಸ್ವಿ ವಕೀಲರಾಗಲು ಅನುಭವ ಅತ್ಯಂತ ಮುಖ್ಯವಾದ ಅಂಶವಾಗಿದೆ ಎಂದರು.
ಒಬ್ಬ ವಕೀಲ ಕೇವಲ ಕಾನೂನು ಪುಸ್ತಕಗಳು, ಸಿವಿಲ್ ಪ್ರೊಸೀಜರ್, ಎವಿಡೆನ್ಸ್ ಆಕ್ಟ್ ಓದಿದರೆ ಸಾಲದು, ಕೇವಲ ಹಣ ಸಂಪಾದನೆ ಮಾಡುವುದಷ್ಟೇ ವೃತ್ತಿಯ ಉದ್ದೇಶವಾಗಬಾರದು. ಒಬ್ಬ ಅತ್ಯುತ್ತಮ ವಕೀಲನಾಗಬೇಕಾದರೆ ಸಾಹಿತ್ಯವನ್ನು ಓದಬೇಕು. ಅದು ಕನ್ನಡವಾಗಿರಲಿ, ಇಂಗ್ಲಿಷ್ ಆಗಿರಲಿ ಅಥವಾ ಯಾವುದೇ ಭಾಷೆಯಾಗಿರಲಿ, ಒಟ್ಟಿನಲ್ಲಿ ಸಾಹಿತ್ಯ ಅಧ್ಯಯನವು ವಕೀಲರ ಆಲೋಚನಾ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಕೆ.ಜಿ. ರಾಘವನ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಕುರಿತು ಸಾಹಿತ್ಯ ಕೂಟದ ಅಧ್ಯಕ್ಷ ಮಂಜುನಾಥ್ ಬಿ ಗೌಡ ಮಾಧ್ಯಮಗಳ ಜೊತೆ ಮಾತನಾಡಿ, ಇಂದಿನ ದಿನಗಳಲ್ಲಿ ಅನೇಕ ಯುವಕರು ವಕೀಲಿ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಬರುತ್ತಿದ್ದು, ಈ ಕಾರಣಕ್ಕೆ ಸಮಾಜದಲ್ಲಿ ಅವರ ಮೇಲೆ ಬಹಳಷ್ಟು ದೊಡ್ಡ ಜವಾಬ್ದಾರಿ ಇದೆ. ಆ ಜವಾಬ್ದಾರಿಯನ್ನು ಅವರು ಸರಿಯಾಗಿ ನಿರ್ವಹಿಸಬೇಕು. ಪ್ರಕರಣಗಳನ್ನು ಗೆಲ್ಲುವುದರ ಜೊತೆಗೆ, ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಅರಿತು ನಡೆದುಕೊಳ್ಳುವುದು ಎಷ್ಟು ಅಗತ್ಯ ಎನ್ನುವುದನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ಅತ್ಯಂತ ಸುದೀರ್ಘವಾಗಿ ಹಾಗೂ ವಿವರವಾಗಿ ಇಂದಿನ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿಗಳಾದ ಕೆ.ಜಿ.ರಾಘವನ್ ತಿಳಿಹೇಳಿದ್ದಾರೆ ಎಂದರು.
ಕೂಟದ ಖಜಾಂಚಿ ಹರೀಶ್ ಜೆ ಮಾತನಾಡಿ, ತಮ್ಮ ಅಮೂಲ್ಯ ಸಮಯವನ್ನು ಕಿರಿಯ ವಕೀಲರ ಮಾರ್ಗದರ್ಶನಕ್ಕಾಗಿ ಮೀಸಲಿಟ್ಟ ಹಿರಿಯ ನ್ಯಾಯವಾದಿ ಕೆ.ಜಿ. ರಾಘವನ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನ್ಯಾಯಾಲಯದಲ್ಲಿ ಪಾಲಿಸಬೇಕಾದ ಶಿಷ್ಟಾಚಾರ, ವೃತ್ತಿಧರ್ಮ, ಕಿರಿಯ ಮತ್ತು ಹಿರಿಯ ವಕೀಲರ ನಡುವಿರಬೇಕಾದ ಗೌರವಯುತ ಬಾಂಧವ್ಯ ಸೇರಿದಂತೆ ಅನೇಕ ವಿಷಯಗಳ ಕುರಿತು ವಿವರಿಸಿದ್ದಾರೆ. ಅವರ ಉಪಸ್ಥಿತಿ ಮತ್ತು ನುಡಿಗಳಿಂದ ಕಾರ್ಯಕ್ರಮದ ಹಿರಿಮೆ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.















