ಬೆಂಗಳೂರು: ಗ್ರಾಮೀಣ ಭಾಗದ ಮಹಿಳಾ ರೈತರ ಸಬಲೀಕರಣ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮತ್ತು ರಾಜ್ಯ ಸರ್ಕಾರದ ದಶಕಗಳ ಸಹಭಾಗಿತ್ವ ಶ್ಲಾಘನೀಯವಾಗಿದೆ ಎಂದು ರಾಜ್ಯ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಹೇಳಿದರು.
ನಬಾರ್ಡ್‌ನ 45ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳಾ ರೈತರು ಮಾಡುತ್ತಿರುವ ಸಾಧನೆಗಳನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುತ್ತಿರುವ ನಬಾರ್ಡ್ ಸಂಸ್ಥೆಯ ಕಾರ್ಯವು ಅರ್ಥಪೂರ್ಣವಾಗಿದೆ. ರಾಜ್ಯ ಸರ್ಕಾರ ಮತ್ತು ನಬಾರ್ಡ್ ನಡುವಿನ ಸಂಬಂಧವು ಅತ್ಯಂತ ನಿಕಟವಾಗಿ ಬೆಳೆದುಬಂದಿರುವ ಸುದೀರ್ಘ ಬಾಂಧವ್ಯವಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ ಪ್ರಸ್ತುತ ಲಭ್ಯವಿರುವ ಸುಮಾರು 2 ಸಾವಿರ ಕೋಟಿ ರೂ.ಗಳ ನೆರವನ್ನು ಮುಂದಿನ ದಿನಗಳಲ್ಲಿ 3 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಹೇಳಿದರು.
2025-26ನೇ ಆರ್ಥಿಕ ವರ್ಷದಲ್ಲಿ ನಬಾರ್ಡ್ ಕರ್ನಾಟಕದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದ ಅಂದರೆ 32,500 ಕೋಟಿಗೂ ಅಧಿಕ ವಹಿವಾಟು ನಡೆಸಿದೆ. ಅದರಲ್ಲಿ ಬ್ಯಾಂಕ್ ಮತ್ತು ಸಹಕಾರಿ ಸಂಸ್ಥೆಗಳಿಗೆ 25,327 ಕೋಟಿ ರೂ.ಮರುಹಣಕಾಸು ನೆರವು ನೀಡಲಾಗಿದೆ ಎಂದು ನಬಾರ್ಡ್ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ. ಸುರೇಂದ್ರ ಬಾಬು ತಿಳಿಸಿದರು.
ಅಂತರರಾಷ್ಟ್ರೀಯ ಮಹಿಳಾ ರೈತರ ವರ್ಷದ ಅಂಗವಾಗಿ ಆಹಾರ ಭದ್ರತೆ ಮತ್ತು ಕೃಷಿ ವೈವಿಧ್ಯತೆಯಲ್ಲಿ ಸಾಧನೆ ಮಾಡಿದ ಧಾರವಾಡ, ದಾವಣಗೆರೆ, ತುಮಕೂರು, ಮೈಸೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಐದು ಮಂದಿ ಮಹಿಳಾ ರೈತರನ್ನು ಗೌರವಿಸಲಾಯಿತು.













