ರಾಯಬಾಗ: ಬಾವನ ಸೌಂದತ್ತಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಬಯಲಿಗೆಳೆದ ಮಾಹಿತಿ ಹಕ್ಕು ಕಾರ್ಯಕರ್ತನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಿಡಿಒ ಮತ್ತು ಅಧ್ಯಕ್ಷ ಸೇರಿದಂತೆ 6 ಜನರ ಮೇಲೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಾಹಿತಿ ಹಕ್ಕು ಕಾರ್ಯಕರ್ತ ರಮೇಶ ಬನ್ನೆ ಎಂಬುವವರು ಹಲ್ಲೆಗೊಳಗಾಗಿದ್ದು, ಈ ಆರೋಪದ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಗಮೇಶ ನ್ಯಾಮಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಕಾಟೆ, ಧೂಳಗೌಡ ಪಾಟೀಲ, ಚೇತನ ಕಾಟೆ, ಅನಿಲ ಬೆಳಗಲಿ ಹಾಗೂ ರಾಜೂ ಕೂಗೆ ವಿರುದ್ಧ ಪ್ರಕರಣ ದಾಖಲಾಗಿದೆ.
ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕಾಮಗಾರಿ, ಅನುದಾನ ಬಳಕೆ ಹಾಗೂ ದಾಖಲೆಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿ ಪಡೆದಿದ್ದ ರಮೇಶ ಬನ್ನೆ ಹಗರಣ ಪ್ರಶ್ನಿಸಿದ ಕಾರಣಕ್ಕೆ ಆರೋಪಿತರು ಸೇರಿಕೊಂಡು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅವರು ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರತಿ ದೂರು ದಾಖಲು:
ಮುಂದುವರೆದು ರಾಯಬಾಗ ಪೋಲಿಸ್ ಠಾಣೆಯಲ್ಲಿ ಪಿಡಿಒ ಸಂಗಮೇಶ ನ್ಯಾಮಗೌಡ, ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಕಾಟೆ ಮತ್ತು ಇನ್ನಿತರರು ಕೂಡ ರಮೇಶ ಬನ್ನೆ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ.














