ಬೆಂಗಳೂರು: ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಕೃತಕ ಬುದ್ಧಿಮತ್ತೆ ಶಕ್ತಿವರ್ಧಕವಾಗಿ ಕಾರ್ಯನಿರ್ವಹಿಸಬೇಕು ಎಂದು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬುಧವಾರ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಗಣದಲ್ಲಿ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ವೋಲ್ವರ್ ವೋಲ್ವರ್‌ಹ್ಯಾಂಪ್ಟನ್- ಬೆಂಗಳೂರು ಸೆಂಟರ್ ಫಾರ್ ರಿಸರ್ಚ್ ಅಂಡ್ ಇನೋವೇಷನ್ ವತಿಯಿಂದ ಆಯೋಜಿಸಿದ್ದ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಕೃತಕ ಬುದ್ಧಿಮತ್ತೆಯ ಪರಿಣಾಮಕಾರಿ ಬಳಕೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ, ಸಂಶೋಧಕರು, ಶಿಕ್ಷಣ ತಜ್ಞರು, ಕೈಗಾರಿಕಾ ವಲಯದ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ ಬಳಸುವ ಮೂಲಕ ಸಮಾಜಮುಖಿ ಅಭಿವೃದ್ಧಿಗೆ ವೇಗ ನೀಡಬೇಕು ಹಾಗೂ ಮುಂದಿನ ತಲೆಮಾರಿನ ನವೋದ್ಯಮಿಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.
ಬಡತನ ನಿರ್ಮೂಲನೆ, ಉತ್ತಮ ಆರೋಗ್ಯ ಸೇವೆ, ಗುಣಮಟ್ಟದ ಶಿಕ್ಷಣ, ಅಸಮಾನತೆ ನಿವಾರಣೆ ಹಾಗೂ ಹವಾಮಾನ ಬದಲಾವಣೆಯಂತಹ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಇನ್ನೂ ಸಾಕಷ್ಟು ಅಂತರವಿದೆ. ಈ ಅಂತರವನ್ನು ಕಡಿಮೆ ಮಾಡುವಲ್ಲಿ ಕೃತಕ ಬುದ್ಧಿಮತ್ತೆ ಅಪೂರ್ವ ಅವಕಾಶವನ್ನು ಒದಗಿಸುತ್ತಿದ್ದು, ಅದನ್ನು ಮಾನವ ಕಲ್ಯಾಣದ ದೃಷ್ಟಿಯಿಂದ ಜವಾಬ್ದಾರಿಯುತವಾಗಿ ಬಳಸಬೇಕಾಗಿದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ ಯಾವುದೇ ರಕ್ಷಕನಲ್ಲ. ಅದಕ್ಕೆ ಆತ್ಮಸಾಕ್ಷಿ, ಧೈರ್ಯ ಅಥವಾ ಕರುಣೆ ಇಲ್ಲ. ಆದರೆ ಆತ್ಮಸಾಕ್ಷಿ, ಧೈರ್ಯ ಮತ್ತು ಕರುಣೆ ಹೊಂದಿರುವ ಮನುಷ್ಯನ ಕೈಯಲ್ಲಿ ಅದು ಅತ್ಯಂತ ಶಕ್ತಿಯುತ ಸಾಧನವಾಗುತ್ತದೆ. ಎಐ ನಮ್ಮ ಸಮಸ್ಯೆಗಳನ್ನು ಪರಿಹರಿಸಬಹುದೇ ಎನ್ನುವುದಕ್ಕಿಂತ, ಸಮಾಜಕ್ಕೆ ಅತ್ಯಂತ ಅಗತ್ಯವಿರುವ ಸಮಸ್ಯೆಗಳ ಪರಿಹಾರಕ್ಕಾಗಿ ನಾವು ಅದನ್ನು ಎಷ್ಟು ಜವಾಬ್ದಾರಿಯಿಂದ ಬಳಸುತ್ತೇವೆ ಎನ್ನುವುದು ಮುಖ್ಯ ಎಂದರು.
ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯತ್ತ ಸಾಗುವ ಸಂದರ್ಭದಲ್ಲಿ ತಂತ್ರಜ್ಞಾನ ಸದಾ ಮಾನವ ಕೇಂದ್ರಿತವಾಗಿರಬೇಕು. ವೈದ್ಯರಿಗೆ ಜೀವ ಉಳಿಸಲು, ರೈತರಿಗೆ ಉತ್ಪಾದಕತೆ ಹೆಚ್ಚಿಸಲು, ಸರ್ಕಾರಗಳಿಗೆ ನಾಗರಿಕ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನೀಡಲು ಹಾಗೂ ಯುವ ನವೋದ್ಯಮಿಗಳಿಗೆ ಸಮಾಜಮುಖಿ ಪರಿಹಾರಗಳನ್ನು ರೂಪಿಸಲು ಎಐ ನೆರವಾಗಬೇಕು. ಇದೇ ನಮ್ಮ ಭವಿಷ್ಯದ ದಿಕ್ಕಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ನವೋದ್ಯಮಿಗಳು ತಂತ್ರಜ್ಞಾನ ಅಭಿವೃದ್ಧಿಯ ಕೇಂದ್ರಬಿಂದುವಾಗಿ ಮಾನವನನ್ನು ಪರಿಗಣಿಸಬೇಕು. ಕೃತಕ ಬುದ್ಧಿಮತ್ತೆಯನ್ನು ಕೇವಲ ತಾಂತ್ರಿಕ ಸಾಧನವಾಗಿ ಮಾತ್ರವಲ್ಲದೆ, ಸಮಾನತೆ, ಒಳಗೊಳ್ಳುವಿಕೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಸಾಧನವಾಗಿ ಬಳಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಸರ್ಕಾರ ದೇಶದ ಮೊದಲ ವಿಶೇಷ ಎಐ ವಿಶ್ವವಿದ್ಯಾಲಯ, ವಿಶ್ವದ ಅತ್ಯಂತ ಕೈಗೆಟಕುವ ಎಐ ಸಿದ್ಧ ವೈಯಕ್ತಿಕ ಕಂಪ್ಯೂಟರ್ ಅಭಿವೃದ್ಧಿ, ಡೀಪ್-ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ, ನಿಪುಣ ಕರ್ನಾಟಕ, ಜಾಗತಿಕ ನಾವೀನ್ಯತಾ ಸಹಭಾಗಿತ್ವಗಳು ಹಾಗೂ ಎಐ ಆಧಾರಿತ ಇ-ಆಡಳಿತ ಕಾರ್ಯಕ್ರಮಗಳ ಮೂಲಕ ಜವಾಬ್ದಾರಿಯುತ ಹಾಗೂ ಭವಿಷ್ಯೋನ್ಮುಖ ಎಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಬದ್ಧತೆಯನ್ನು ಮುಂದುವರಿಸಿದೆ ಎಂದು ಸಚಿವರು ವಿವರಿಸಿದರು.
ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಕೃತಕ ಬುದ್ಧಿಮತ್ತೆ ಶಕ್ತಿವರ್ಧಕವಾಗಿ ಕಾರ್ಯನಿರ್ವಹಿಸಬೇಕಿದ್ದು, ವಿದ್ಯಾರ್ಥಿಗಳು ಎಐ ಕೌಶಲ್ಯಗಳ ಜೊತೆಗೆ ಮೂಲಭೂತ ಜ್ಞಾನ, ವೈಜ್ಞಾನಿಕ ಮನೋಭಾವ ಹಾಗೂ ವಿಮರ್ಶಾತ್ಮಕ ಚಿಂತನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ವಿಶ್ವವಿದ್ಯಾಲಯಗಳು ಮೂಲಸೌಕರ್ಯಕ್ಕಿಂತ ಸಂಶೋಧನೆ, ನಾವೀನ್ಯತೆ, ಉದ್ಯಮಶೀಲತೆ ಮತ್ತು ಉದ್ಯೋಗಾರ್ಹತೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಜಾಗತಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಯುವ ನವೋದ್ಯಮಿಗಳನ್ನು ರೂಪಿಸಬೇಕು. ಶಿಕ್ಷಣ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಎಐ ಬಳಕೆಯಿಂದ ಕಲಿಕೆ ಹಾಗೂ ನಾಗರಿಕ ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸಬಹುದಾಗಿದ್ದು, ಸರ್ಕಾರಗಳು ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧಕರಿಗೆ ಮೊದಲ ಗ್ರಾಹಕರಾಗಿ ಬೆಂಬಲ ನೀಡುವ ಮೂಲಕ ಸಮಾಜಮುಖಿ ಎಐ ಪರಿಹಾರಗಳ ಅಭಿವೃದ್ಧಿಗೆ ಉತ್ತೇಜನ ನೀಡಬೇಕು ಎಂದು ತಿಳಿಸಿದರು.
ಕರ್ನಾಟಕ ಸರ್ಕಾರ ಡೀಪ್-ಟೆಕ್, ಸ್ಟಾರ್ಟ್‌ಅಪ್ ಗಳಿಗೆ ಬೆಂಬಲ, ಕೌಶಲ್ಯಾಭಿವೃದ್ಧಿ ಹಾಗೂ ಜಾಗತಿಕ ಸಹಭಾಗಿತ್ವಗಳ ಮೂಲಕ ಎಐ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದು, ವಿಶ್ವದ ನಾಲ್ಕನೇ ಅತಿದೊಡ್ಡ ತಂತ್ರಜ್ಞಾನ ಕೇಂದ್ರ ಹಾಗೂ ಎಐ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲದಲ್ಲಿ ಜಾಗತಿಕವಾಗಿ ಬೆಂಗಳೂರು ಮೂರನೇ ಸ್ಥಾನದಲ್ಲಿರುವುದು ರಾಜ್ಯದ ತಾಂತ್ರಿಕ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ರಮೇಶ್ ಬಿ. ಮಾತನಾಡಿ, ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೌಶಲ್ಯಾಧಾರಿತ ತರಬೇತಿ ಕಾರ್ಯಕ್ರಮಗಳಿಗೆ ವಿಶ್ವವಿದ್ಯಾಲಯ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.
ರಾಯಲ್ ವೋಲ್ವರ್ ಹ್ಯಾಂಪ್ಟನ್ ಆಸ್ಪತ್ರೆಯ ನಿರ್ದೇಶಕ ಪ್ರೊ. ಟೋನಿ ವಿನ್ನೀತ್ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಚಿಕಿತ್ಸಾ ಸೇವೆಗಳ ಗುಣಮಟ್ಟ ಮತ್ತು ಸಂಶೋಧನೆಗೆ ದೊರೆಯುತ್ತಿರುವ ಪ್ರಯೋಜನಗಳನ್ನು ವಿವರಿಸಿದರು.
ಇದೇ ವೇಳೆ ಸಮ್ಮೇಳನದ ಸ್ಮರಣ ಸಂಚಿಕೆ ಹಾಗೂ ಸಂಶೋಧನಾ ಜರ್ನಲ್ ಜಾರಿಸ್ ಅನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಆರ್‌ಜಿಯುಎಚ್‌ಎಸ್ ಕುಲಪತಿ ಪ್ರೊ. ಭಗವಾನ್ ಬಿ, ವೋಲ್ವರ್ ಹ್ಯಾಂಪ್ಟನ್ ವಿವಿಯ ಸಂಶೋಧನೆ ಮತ್ತು ಜ್ಞಾನ ವಿನಿಮಯ ಕೇಂದ್ರದ ಸಮಕುಲಾಧಿಪತಿ ಪ್ರೊ. ಪ್ರಶಾಂತ್ ಪಿಳ್ಳೆ, ನಿರ್ದೇಶಕ ಪ್ರೊ. ಸುರೇಶ್ ರೇಣುಕಪ್ಪ, ಸಹ ನಿರ್ದೇಶಕಿ ಪ್ರೊ. ಸುಭಾಷಿಣಿ ಸುರೇಶ್, ಕುಲಸಚಿವ (ಮೌಲ್ಯಮಾಪನ) ಪ್ರೊ. ರಮೇಶ್ ಬಿ. ಕುಡೇನಟ್ಟಿ ಸೇರಿದಂತೆ ಇತರರು ಇದ್ದರು.















