ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರನೇ ವರ್ಷಕ್ಕೆ ಕಾಲಿಟ್ಟಿದೆ ಆದರೆ ವೋಟು ಕೊಟ್ಟು ಅಧಿಕಾರಕ್ಕೆ ತಂದ ಬಡವರು ಪ್ರತಿದಿನ ಕಚೇರಿಗಳಿಗೆ ಅಲೆಯುವಂತಾಗಿದೆ ಎಂದು ಭೀಮಸಂಘಟನೆಗಳ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕೆ ಮರಿಯಪ್ಪ ಕಿಡಿಕಾರಿದರು.
ಶುಕ್ರವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ 500 ಕ್ಕೂ ಹೆಚ್ಚು ಭೀಮ ಸಂಘಟನೆಗಳ ಮಹಾ ಒಕ್ಕೂಟದ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಿದರು. ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಕೆ ಮರಿಯಪ್ಪ, ಈಗ ನಡೆಯುತ್ತಿರುವ ಧರಣಿ ಸತ್ಯಾಗ್ರಕ್ಕೆ ರಾಜ್ಯ ಸರ್ಕಾರದ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಅನೇಕ ಬಾರಿ ನಮ್ಮ ಹಲವು ಸಮಸ್ಯೆಗಳ ಬಗ್ಗೆ ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದಿರುವುದು ದಲಿತಪರ ನಿರ್ಲಕ್ಷತನಕ್ಕೆ ಸಾಕ್ಷಿಯಾಗಿದೆ. ಅದ್ದರಿಂದ ಹೋರಾಟ ಮುಂದಿನ ದಿನಗಳಲ್ಲಿ ತೀಕ್ಷ್ಣ ಸ್ವರೂಪ ಪಡೆಯಲಿದೆ. ಸರ್ಕಾರಿ ಭೂಮಿ, ರಾಜಕಾಲುವೆ, ನೀರು ಹರಿವ ಹಳ್ಳ ಸೇರಿಸಿ ಹಲವು ಕಡೆ ಕಾಂಪೌಂಡ್ ಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಅವನು ತೆರವುಗೊಳಿಸಿ ವಸತಿ ಹಕ್ಕು ಪತ್ರಗಳನ್ನು ನೀಡಬೇಕು ಎಂದರು.
ಬೆಂಗಳೂರು ದಕ್ಷಿಣ ತಾಲ್ಲೂಕು ಉತ್ತರಹಳ್ಳಿ ಹೋಬಳಿ, ಕೆಂಭತಹಳ್ಳಿ ಸರ್ವೆ ನಂ.55ರಲ್ಲಿ ನೈಸ್ ಕಂಪನಿಗೆ ಲೀಸ್ಗೆ ಕೊಟ್ಟಿರುವ ಭೂಮಿಯಲ್ಲಿ ಇರುವ ರಾಜಕಾಲುವೆ, ಆಶ್ರಯ ಭೂಮಿ, ನೀರು ಹರಿಯುವ ಹಳ್ಳ ಸೇರಿಸಿ ಅಕ್ರಮವಾಗಿ ಕಂಪೌಂಡ್ ಹಾಕಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅಲ್ಲಿ ಕಟ್ಟಿಕೊಂಡಿರುವ ಮನೆಗಳಿಗೆ ಹಕ್ಕು ಪತ್ರ ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕು ಎಂದು ಹೇಳಿದರು.
ಇನ್ನು ಬೆಂಗಳೂರು ಪೂರ್ವ ತಾಲ್ಲೂಕು ಮಾರತ್ ಹಳ್ಳಿ ಸರ್ವೆ ನಂ. 33 ರಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿಯ ಮನೆಗಳಲ್ಲಿ ವಾಸ ಮಾಡುತ್ತಿರುವ ಬಡವರಿಗೆ ಹಂಚಿಕೆ ಪತ್ರ ನೀಡಬೇಕು ಇನ್ನೂ ಇದೇ ತಾಲೂಕಿನ ಸಿ.ವಿ. ರಾಮನ್ ನಗರದ ನಾಗವಾರಪಾಳ್ಯ ಗುಡಿಸಲುಗಳನ್ನು ಸ್ಲಂ ಎಂದು ಘೋಷಣೆ ಮಾಡಿ ಅವರಿಗೆ ಬದಲಿ ನಿವೇಶನಗಳನ್ನು ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರು ದಕ್ಷಿಣ ತಾಲ್ಲೂಕು ಉತ್ತರಹಳ್ಳಿ ಹೋಬಳಿ ಪಿಲ್ಲಗಾನಹಳ್ಳಿ ಗ್ರಾಮದ ಸರ್ವೆ ನಂ. 1 ರಲ್ಲಿ 94 ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಹಕ್ಕು ಪತ್ರ ಕೊಡಬೇಕು. ಈಗಾಗಲೇ ತಾತ್ಕಾಲಿಕ ಹಕ್ಕು ಪತ್ರಗಳನ್ನು ರದ್ದು ಮಾಡಿರುವುದನ್ನು ಸಕ್ರಮಗೊಳಿಸಬೇಕು. ಇದೇ ತಾಲೂಕಿನ ತಾವರೆಕೆರೆ ಹೋಬಳಿ ಚಿಕ್ಕಲ್ಲೂರು ಗ್ರಾಮದ ಸರ್ವೆ ನಂ. 49ರಲ್ಲಿದ್ದ ಬಡವರನ್ನು ತೆರವುಗೊಳಿಸಿದವರಿಗೆ ಬದಲಿ ನಿವೇಶನಗಳನ್ನು ನೀಡಬೇಕು ಇನ್ನೂ ಆನೇಕಲ್ ತಾಲ್ಲೂಕು ಕಸಬಾ ಹೋಬಳಿ ಚಿಕ್ಕಹೊಸಹಳ್ಳಿ ಗ್ರಾಮದ ಸರ್ವೆ ನಂ. 112 ರಲ್ಲಿ ಆಶ್ರಯಾ ಯೋಜನೆಯಡಿಯಲ್ಲಿ ಕಟ್ಟಿಕೊಂಡಿರುವ ಮನೆಗಳಿಗೆ ಹಕ್ಕು ಪತ್ರ ನೀಡಬೇಕು ಎಂದು ಕೆ ಮರಿಯಪ್ಪ ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಮುನಿ ಅಂಜನಪ್ಪ ಸೇರಿದಂತೆ ಹಲವು ಮುಖಂಡರುಗಳು ಹಾಜರಿದ್ದರು.















