ಬೆಂಗಳೂರು: ಆಟೋ ಚಾಲಕರ ಮಕ್ಕಳು ಶಿಕ್ಷಣ ಪಡೆಯಲು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರೆ, ಅಂತಹ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಆದಿ ಚುಂಚನಗಿರಿ ಮಠ ವಹಿಸಿಕೊಳ್ಳಲು ಸಿದ್ಧವಿದೆ ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಹೇಳಿದರು.
ಭಾನುವಾರ ಚಿತ್ರರಂಗದ ಮೇರು ನಟ ದಿವಂಗತ ಶಂಕರ್‌ನಾಗ್ ಅವರ ಜನ್ಮದಿನದ ಪ್ರಯುಕ್ತ ಪೀಸ್ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಹಾಗೂ ವಿಷ್ಣು ಸೇನಾ ಸಮಿತಿ ನೇತೃತ್ವದಲ್ಲಿ ಜಯನಗರದ ಶಾಲಿನಿ ಮೈದಾನದಲ್ಲಿ ಆಯೋಜಿಸಿದ್ದ 12ನೇ ವರ್ಷದ ಚಾಲಕರ ದಿನಾಚರಣೆ ಹಾಗೂ ಸನ್ನಡತೆಯುಕ್ತ ಚಾಲಕರಿಗೆ ಚಿನ್ನದ ಪದಕ ಪ್ರಧಾನ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು, ಇಂದು ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ನಾವೆಲ್ಲಾ ಬದುಕುತ್ತಿದ್ದೇವೆ, ಜಾಗತಿಕ ಮಟ್ಟದಲ್ಲಿ ಟೆಕ್ನಾಲಜಿ ದೊಡ್ಡಮಟ್ಟದಲ್ಲಿ ಬೆಳೆಯುತ್ತಿದ್ದು, ಆಟೋ ಚಾಲಕರು ಸಹ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕನಿಷ್ಠಪಕ್ಷ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಮಾತನಾಡಿ, ಮುಂದಿನ ಅಧಿವೇಶನದಲ್ಲಿ ವೈಟ್‌ಬೋರ್ಡ್ ಸೇವೆಗಳನ್ನು ಬ್ಯಾನ್ ಮಾಡುವ ನಿಟ್ಟಿನಲ್ಲಿ ನಾವೆಲ್ಲಾ ಶಾಸಕರು ಧ್ವನಿ ಎತ್ತಲಿದ್ದೇವೆ. ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟದೆಯೇ ಅನಧಿಕೃತವಾಗಿ ಸೇವೆ ನೀಡುತ್ತಿದ್ದಾರೆ. ಇದು ಸಾರ್ವಜನಿಕರಿಗೂ ಸುರಕ್ಷತೆ ವಿಷಯದಲ್ಲಿ ತೊಂದರೆಯಾಗುತ್ತಿದೆ. ಹೀಗಾಗಿ ವೈಟ್‌ಬೋರ್ಡ್ ಬೈಕ್ ಹಾಗೂ ಟ್ಯಾಕ್ಸಿ ಸೇವೆ ಬ್ಯಾನ್ ಆಗಬೇಕು ಎಂದು ಹೇಳಿದರು.
ಪೀಸ್ ಆಟೋ ಮತ್ತು ಟ್ಯಾಕ್ಸಿ ಡ್ರೈರ್ವ ಅಸೋಸಿಯೇಷನ್ ಅಧ್ಯಕ್ಷ ರಘು ನಾರಾಯಣ ಗೌಡ ಮಾತನಾಡಿ, ಕಳೆದ 12 ವರ್ಷಗಳಿಂದ ಶಂಕರ್‌ನಾಗ್ ಅವರ ಜನ್ಮದಿನವನ್ನು ಚಾಲಕರ ದಿನವನ್ನಾಗಿ ಆಚರಿಸುತ್ತಾ ಬಂದಿದ್ದು, ಸನ್ನಡತೆ ಹೊಂದಿರುವ 7 ಚಾಲಕರಿಗೆ ಚಿನ್ನದ ಪದಕ ನೀಡುವ ಮೂಲಕ ಆಟೋ ಚಾಲಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಟಿ ರಚಿತಾರಾಮ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಟ ಡಾರ್ಲಿಂಗ್ ಕೃಷ್ಣ, ನಿರ್ದೇಶಕ ಶಶಾಂಕ್ ಸೇರಿದಂತೆ ಮುಂತಾದವರಿದ್ದರು.















