ಬೆಂಗಳೂರು: ಮಹಿಳೆಯಾಗಿ, ದಲಿತ ಶಾಸಕಿಯಾಗಿ ಆಯ್ಕೆಯಾಗಿರುವುದು ತಪ್ಪು ಎನ್ನುವಂತೆ ಕೆಲ ಸ್ವಕ್ಷೇತ್ರದ, ಸ್ವಪಕ್ಷೀಯ ಮುಖಂಡರು ನನ್ನ ವಿರುದ್ಧ ಇಲ್ಲ ಸಲ್ಲದ ಹೇಳಿಕೆಗಳನ್ನು, ಆರೋಪಗಳನ್ನು ಮಾಡುತ್ತಿದ್ದಾರೆ. ಇದನ್ನು ವರಿಷ್ಠರ ಗಮನಕ್ಕೆ ತರಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಸ್ಪಷ್ಟಪಡಿದರು.
ಶುಕ್ರವಾರ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಮತ್ತು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆಯಿಂದಲೂ ನನ್ನ ವಿರುದ್ಧ ಸ್ವಪಕ್ಷೀಯ ಮುಖಂಡರು ಕುತಂತ್ರ ನಡೆಸುತ್ತಿದ್ದು, ಕೆಲ ಬಾರಿ ವರಿಷ್ಠರಿಗೆ ದೂರನ್ನು ಸಹ ನೀಡಿದ್ದಾರೆ. 2018ರ ಚುನಾವಣೆ ಮತ್ತು ಅದರ ಹಿಂದಿನ ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವ ಕಡಿಮೆಯಾಗಿತ್ತು. ಆದರೆ ನಾನು ನಿರಂತರ ಹೋರಾಟ ನಡೆಸಿ ಬೂತ್ ಮಟ್ಟದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತಗೆದುಕೊಂಡು ಜಯಭೇರಿ ಬಾರಿಸುವಂತೆ ಮಾಡಿದ್ದೇನೆ ಎಂದರು.
ಯಾರೋ ಒಬ್ಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನನ್ನು ಹೊರತುಪಡಿಸಿದರೆ. ಬೇರೆಲ್ಲ ಬ್ಲಾಕ್ ಅಧ್ಯಕ್ಷರುಗಳು ನನ್ನ ಜೊತೆ ಇದ್ದಾರೆ. ನಮ್ಮ ಕಾರ್ಯಕರ್ತರು ಹಾಗೂ ಬೆಂಬಲಿಗರು ಆರ್ ಎಸ್ ಎಸ್ ಮತ್ತು ಬಜರಂಗದಳದ ಜೊತೆಗೆ ಗುರುತಿಸಿಕೊಂಡಿದ್ದಾರೆ ಎಂದು ಆರೋಪಿಸುವವರು ಸುಮಾರು 30 ವರ್ಷದಿಂದ ಪಕ್ಷವನ್ನು ಅಧಿಕಾರಕ್ಕೆ ತರಲು ಏಕೆ ಸಾಧ್ಯವಾಗಲಿಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಕುತಂತ್ರಿಗಳನ್ನು ಜೊತೆಯಲ್ಲಿ ಇಟ್ಟುಕೊಂಡು ಕೆಲಸ ಮಾಡಲು ಸಾಧ್ಯ. ಈ ಎಲ್ಲಾ ವಿಚಾರಗಳನ್ನು ವರಿಷ್ಠರ ಗಮನಕ್ಕೆ ತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಹಿರಿಯರು ಕಿರಿಯರು ಎಂಬ ಭೇದಭಾವವಿಲ್ಲ:
ಪಕ್ಷದಲ್ಲಿ ಹಿರಿಯರು ಕಿರಿಯರು ಎಂಬ ಭೇದಭಾವವಿಲ್ಲ. ಯಾರು ಪಕ್ಷಕ್ಕಾಗಿ ದುಡಿಯುತ್ತಾರೋ ಅಂತವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಮ್ಮ ತಾಯಿಯ ಕಾಲದಲ್ಲಿ ಇದ್ದ ಕೆಲ ಸಮಕಾಲಿನ ಮುಖಂಡರು ಕೇವಲ ಒಂದು ಹೋಬಳಿಗೆ ಮಾತ್ರ ಸೀಮಿತರಾಗಿದ್ದು, ಅವರ ಮಾತನ್ನೇ ಅನುಸರಿಸಬೇಕು ಎನ್ನುವ ಧೋರಣೆ ಸರಿಯಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷಕ್ಕಾಗಿ ಅವಿರತವಾಗಿ ಶ್ರಮಿಸುತ್ತಿರುವವರ ಮಾತನ್ನು ಸಹ ಕೇಳಬೇಕು ಎನ್ನುವುದು ನನ್ನ ಅಭಿಪ್ರಾಯವಾಗಿದೆ. ನನ್ನ ವಿರುದ್ಧ ಕೆಲ ದಿನಗಳ ಹಿಂದೆ ದೂರನ್ನು ನೀಡಿರುವವರು ಕೆಲವೇ ಕೆಲವು ಜನರಷ್ಟೇ ಎಂದು ಮಾಹಿತಿ ನೀಡಿದರು.















