ಬೆಂಗಳೂರು; ರಾಜ್ಯ ನಗರಪಾಲಿಕೆ, ನಗರ ಸಭೆ, ಪುರಸಭೆಗಳ, ಪೌರ ಮಹಾ ಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ಸಪಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ, ಮೈಸೂರು ಮಹಾನಗರ ಪಾಲಿಕೆ ಮಾಜಿ ಮಹಾಪೌರ ಮೈಸೂರು ನಾರಾಯಣರವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕೆಂದು ಪೌರ ಕಾರ್ಮಿಕರ ಮಹಾಸಂಘ ಒತ್ತಾಯಿಸಿದೆ.
ಶುಕ್ರವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಂಘದ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್, ಬೆಂಗಳೂರು ನಗರದ ನೈರ್ಮಲ್ಯ ಕಾಪಾಡುವ ಪೌರಕಾರ್ಮಿಕರನ್ನು ಗುತ್ತಿಗೆ ಪದ್ಧತಿಯಲ್ಲಿ ತುಂಬಾ ಗುತ್ತಿಗೆದಾರರು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ವೇತನ ಸರಿಯಾಗಿ ನೀಡದೆ ಅನ್ಯಾಯ ವೆಸಗುತ್ತಿದ್ದರು, ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದ್ದ ಪೌರಕಾರ್ಮಿಕರು ಈಗ ಕೈತುಂಬಾ ವೇತನ ಪಡೆದು ಸಮಾಜದಲ್ಲಿ ಗೌರವದಿಂದ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣಕರ್ತರು ಮೈಸೂರು ನಾರಾಯಣ ಅವರು ಎಂದು ಹೇಳಿದರು.
ನಾರಾಯಣ ರಾಜ್ಯಾದ್ಯಂತ ಪೌರಕಾರ್ಮಿಕರ ಮನೆಗಳಲ್ಲಿ ದೀಪ ಬೆಳಗಲು ಕಾರಣವಾದ ಆಶಾಕಿರಣರಾಗಿದ್ದಾರೆ. ಇಂತಹ ಒಬ್ಬ ಮೇರು ಮಾನವತವಾದಿ ನಾರಾಯಣರವರನ್ನು ಸರ್ಕಾರ ಗುರುತಿಸಿ ಹಲವಾರು ಜವಾಬ್ದಾರಿಯನ್ನು ಕೊಟ್ಟಿದೆ, ಅದನ್ನು ಜವಾಬ್ದಾರಿಯಿಂದ ನಿರ್ವಹಿಸಿ ಯಶ್ವಸಿಯಾಗಿ ಕಾರ್ಯನಿರ್ವಹಿಸಿದ್ದಾರೆ, ಅವರ ರಾಜಕೀಯ ಮತ್ತು ಸಾಮಾಜಿಕ ಬದುಕಿನುದ್ದಕ್ಕೂ ಪೌರಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸಲು ಶ್ರಮಿಸಿದ್ದಾರೆ ಎಂದು ನೆನೆದರು.
ಪ್ರಧಾನ ಕಾರ್ಯದರ್ಶಿ ಎನ್.ಆಂಜನೇಯಲು ಮಾತನಾಡಿ, ಮೇರು ವ್ಯಕ್ತಿತ್ವವುಳ್ಳ ಇವರಿಗೆ ರಾಜಕೀಯ ಶಕ್ತಿ ತುಂಬಿದರೆ ಪೌರಕಾರ್ಮಿಕರು, ಕಸ ಸಾಗಾಣಿಕೆ ಕೆಲಸ ಮಾಡುವ ವಾಹನ ಚಾಲಕರು, ಕ್ಲೀನರ್‌ಗಳು, ಒಳಚರಂಡಿ ಕಾರ್ಮಿಕರ ಬಾಳಿನಲ್ಲಿ ಬೆಳಕು ತುಂಬುವ ಕೆಲಸವಾಗುತ್ತದೆ. ಆದ್ದರಿಂದ ನಾರಾಯಣರವರನ್ನು ವಿಧಾನ ಪರಿಷತ್ ಸದಸ್ಯರಾಗಿ ನಾಮ ನಿರ್ದೇಶನ ಮಾಡಬೇಕು ಎಂದರು.
ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ, ರಾಜ್ಯ ಸಂಚಾಲಕ ಓಬಳೇಶ್, ಬೆಂ.ನಗರ ಅಧ್ಯಕ್ಷ ಎಸ್.ವೆಂಕಟೇಶ್ವರಲು, ಪ್ರದಾನ ಕಾರ್ಯದರ್ಶಿ ಗಂಗಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ, ಭುವನೇಶ್ವರ, ಎಂ.ಸಿ.ವಿಲ್ಸನ್ ಮತ್ತಿತರರು ಹಾಜದ್ದರು.















