ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದಕ್ಕೆ ಫಲ ಸಿಕ್ಕಿದೆ: ಸಚಿವ ಪಿ.ಎಂ. ನರೇಂದ್ರಸ್ವಾಮಿ

WhatsApp
Telegram
Facebook
Twitter
LinkedIn

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ದುಡಿದರೆ ತಡವಾಗಿಯಾದರೂ ಸೂಕ್ತ ಫಲ ಸಿಗುತ್ತದೆ ಎಂಬುದಕ್ಕೆ ನನಗೆ ಸಿಕ್ಕಿರುವ ಸಚಿವ ಸ್ಥಾನವೇ ಸಾಕ್ಷಿ ಎಂದು ನೂತನ ಸಚಿವ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.

ಮಂಗಳವಾರ ಸಂಜೆ ಶಾಸಕರ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳಿಂದ ಕಾಂಗ್ರೆಸ್‌ ಪಕ್ಷಕ್ಕೆ ಸಂಘಟನೆ ಹಾಗೂ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. 2013 ಹಾಗೂ 2023ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಅವಕಾಶಗಳಿತ್ತು. ಆದರೆ ಈಗ ಸಚಿವ ಸ್ಥಾನ ಒಲಿದು ಬಂದಿದೆ ಎಂದರು.

ಸಂಪುಟ ವಿಸ್ತರಣೆಯ ವೇಳೆ ಹೈಕಮಾಂಡ್‌ ನಾಯಕರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ಹಿರಿಯ ನಾಯಕರು ಆಲೋಚಿಸಿ, ಎಲ್ಲಾ ವರ್ಗ ಹಾಗೂ ಜಿಲ್ಲೆಗಳಿಗೆ ಆದ್ಯತೆ ನೀಡಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

2028ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ:

ಮುಂದಿನ ಚುನಾವಣೆಗೆ ಇನ್ನು ಕೇವಲ ಎರಡು ವರ್ಷಗಳಷ್ಟೇ ಬಾಕಿ ಇದ್ದು, ಸರ್ಕಾರ ಹಾಗೂ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕಾಗಿದೆ. ಇದಕ್ಕಾಗಿ ಗ್ಯಾರಂಟಿ ಯೋಜನೆಗಳ ಜೊತೆ ಜೊತೆಗೆ ಯುವ ಪೀಳಿಗೆಗೆ ಹಾಗೂ ಸಾರ್ವಜನಿಕರ ಆಶೋತ್ತರಗಳಿಗೆ ಸ್ಪಂದಿಸುವ ವಿನೂತನ ಯೋಜನೆಗಳನ್ನು ಜಾರಿಗೆ ತರಲಾಗುವುದು. ಇನ್ನಷ್ಟು ಉತ್ತಮ ಆಡಳಿತ ನೀಡುವ ಮೂಲಕ 2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಿಶ್ಚಿತವಾಗಿದೆ. ಇದರೊಂದಿಗೆ 2029ರಲ್ಲಿ ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡುವುದೇ ನಮ್ಮೆಲ್ಲರ ಶಪಥವಾಗಿದೆ ಎಂದರು.

ಮಳವಳ್ಳಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು:

ಮಳವಳ್ಳಿ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಸಿಎಸ್ಆರ್ ಅನುದಾನದ ಮೂಲಕ ಡಿಜಿಟಲೀಕರಣ ಹಾಗೂ ಮಲ್ಟಿಮೀಡಿಯಾ ಸೌಲಭ್ಯ ಒದಗಿಸಿ ಆಧುನಿಕ ಶಿಕ್ಷಣ ನೀಡಲಾಗುತ್ತಿದೆ. ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸುಮಾರು 30 ಸಾವಿರ ಎಕರೆ ಭೂಮಿಗೆ ಹನಿ ನೀರಾವರಿ ಯೋಜನೆ ಸಿದ್ಧಗೊಂಡಿದೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ಕಲ್ಪಿಸಲು ಫುಡ್ ಪ್ರೊಸೆಸಿಂಗ್ ಯುನಿಟ್‌ಗಳನ್ನು ಸ್ಥಾಪಿಸುವ ಯೋಜನೆ ಇದೆ ಎಂದು ತಿಳಿಸಿದರು.

ಜಿಲ್ಲೆಯ ಯೋಜನೆಗಳಿಗೆ ಆಧುನಿಕೀಕರಣ:

ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ನಾಲಾಗಳ ಆಧುನಿಕೀಕರಣ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಮುಂದುವರೆದು ಪ್ರತಿಯೊಂದು ಕೆರೆಗೂ ನೀರು ತಲುಪುವಂತೆ ನೆಟ್‌ವರ್ಕ್ ರೂಪಿಸಲಾಗುತ್ತಿದೆ. ರೈತರ ಆದಾಯ ಹೆಚ್ಚಿಸಿ, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದೇ ನಮ್ಮ ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು  ಪಿ.ಎಂ. ನರೇಂದ್ರಸ್ವಾಮಿ ಮಾಹಿತಿ ನೀಡಿದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon