ಬೆಂಗಳೂರು: ಮಡಿವಾಳ ಸಮುದಾಯದ ಮುಖಂಡರಾದ ಕೆ. ವಿ. ಅಮರನಾಥ್ ರನ್ನು ವಿಧಾನ ಪರಿಷತ್ ಸದಸ್ಯರಾಗಿ ಮಾಡುವಂತೆ ರಾಜ್ಯ ಮಡಿವಾಳರ ಸಂಘ ಆಗ್ರಹಿಸಿದೆ.
ಶನಿವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಿ.ನಂಜಪ್ಪ, ಕೆ. ವಿ. ಅಮರನಾಥ್ ಸಮುದಾಯದ ಸೇವೆ ಮಾಡುತ್ತಾ ಮತ್ತು ಸಮಾಜದ ಅನೇಕ ಸಮಾವೇಶಗಳಿಗೆ ಆರ್ಥಿಕ ಸಹಾಯ, ಸಂಘಟನೆ ಮಾಡುತ್ತಾ ಬಂದಿದ್ದಾರೆ. ಅವರು ಮಡಿವಾಳ ಸಮುದಾಯದ ಯಾವುದೇ ಸಮಸ್ಯೆಗೂ ಸ್ಪಂದಿಸಿ ನೆರವಾಗುವ ಮೂಲಕ ಸಮುದಾಯದ ಮುಂಚೂಣಿಯ ನಾಯಕರಾಗಿದ್ದಾರೆ. ಸಮಾಜ ಸೇವೆ ಮಾಡುವ ಉದ್ದೇಶದಿಂದ ರಾಜಕೀಯ ಕ್ಷೇತ್ರಕ್ಕೆ ಬಂದು ಕಾಂಗ್ರೆಸ್ ಪಕ್ಷವನ್ನು ಸೇರಿ ಪಕ್ಷವನ್ನು ಸಂಘಟನೆ ಮಾಡಿ ತುಮಕೂರಿನಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಬೃಹತ್ ಜನ ಜಾಗೃತಿ ಸಮಾವೇಶವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿಸಿದರು ಎಂದರು.
ಸಮಾಜ ಸೇವೆ ಎನ್ನುವುದು ಕೆ. ವಿ. ಅಮರ್‌ನಾಥ್ ರವರ ರಕ್ತದಲ್ಲಿ ಬೆರೆತು ಹೋಗಿದೆ. ನೊಂದು ಬಂದವರನ್ನು ಯಾವತ್ತು ಬರಿಗೈಯಲ್ಲಿ ಕಳಿಸಿದವರಲ್ಲ. ಹಾಗೆಯೇ ಬದುಕಿನಲ್ಲಿ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಅನುದಾನವನ್ನು ನೀಡಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಸಮುದಾಯ ಭವನಗಳಿಗೆ ಸಹಾಯ ಹಸ್ತ ನೀಡಿದ್ದಾರೆ. ಮಡಿವಾಳ ಸಮುದಾಯದ ಪ್ರಮುಖರಾಗಿ ರಾಜಕೀಯ ಧುರೀಣರಾಗಿ ಕಾಂಗ್ರೆಸ್ ಪಕ್ಷದ ಪ್ರಚಾರಕರಾಗಿ ಕೆಲಸ ನಿರ್ವಹಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿರುವ ಅವಧಿಯ ಸಮಾವೇಶದಲ್ಲಿ ರಾಜಕೀಯವಾಗಿ ನೀವುಗಳು ಹಿಂದುಳಿದಿದ್ದು ನಿಮಗೆ ರಾಜಕೀಯ ಶಕ್ತಿ ತುಂಬುತ್ತೇನೆ ಎಂದು ಆಶ್ವಾಸನೆ ನೀಡಿದ್ದರು ಎಂದರು.
ಮಡಿವಾಳ ಸಮಾಜವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಎಲ್ಲಾ 30 ಜಿಲ್ಲೆಗಳ ಜಿಲ್ಲಾಧ್ಯಕ್ಷರಿಗೆ ಹಾಗೂ ರಾಜ್ಯ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಕರ್ನಾಟಕ ರಾಜ್ಯದ ಮಡಿವಾಳ ಸಮುದಾಯದ ಸರ್ವರಿಗೂ ಕೆ. ವಿ. ಅಮರನಾಥ್ ರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೋಡಬೇಕೆಂಬ ಆಶಯವಿದೆ ಎಂದು ಸಿ.ನಂಜಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಪ್ರಕಾಶ್, ಉಪಾಧ್ಯಕ್ಷ ರಾಜಣ್ಣ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.














