ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಆಘಾತ: ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ ಸೇರಿ ಹಲವೆಡೆ ದಾಳಿ

WhatsApp
Telegram
Facebook
Twitter
LinkedIn

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಧಿಕಾರಿಗಳಿಗೆ ಲೋಕಾಯುಕ್ತ ಬಿಸಿ ಮುಟ್ಟಿಸಿದ್ದು, ಮಂಗಳವಾರ ಶಿವಮೊಗ್ಗ, ಬಳ್ಳಾರಿ ಮತ್ತು ಚಿತ್ರದುರ್ಗ ಸೇರಿದಂತೆ ಹಲವೆಡೆ ಏಕಕಾಲಕ್ಕೆ ಬೃಹತ್ ದಾಳಿ ನಡೆಸಲಾಗಿದೆ. ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ದೂರುಗಳ ಹಿನ್ನೆಲೆಯಲ್ಲಿ ಈ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರ ತಂಡಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿವೆ.

ಶಿವಮೊಗ್ಗ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಆರ್ ಶೋಭಾ ಅವರ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಶಿವಮೊಗ್ಗ, ಶಿಕಾರಿಪುರ ಹಾಗೂ ಸಾಗರ ತಾಲೂಕು ಸೇರಿದಂತೆ ಒಟ್ಟು 5 ಕಡೆಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ನಡೆಯುತ್ತಿದೆ. ಶಿಕಾರಿಪುರದ ಚೆನ್ನಕೇಶವ ನಗರದಲ್ಲಿರುವ ನಿವಾಸ ಹಾಗೂ ಸಾಗರದ ಅಚಾಪುರದಲ್ಲಿರುವ ಮನೆಗಳ ಮೇಲೆ ಅಧಿಕಾರಿಗಳು ಮುಗಿಬಿದ್ದಿದ್ದಾರೆ. ಕೇವಲ ಅಧಿಕಾರಿಯಷ್ಟೇ ಅಲ್ಲದೆ, ಅವರ ಆಪ್ತ ಸಹಾಯಕನ ಮನೆ ಮೇಲೆಯೂ ದಾಳಿ ನಡೆದಿದೆ. ದಾವಣಗೆರೆ ಲೋಕಾಯುಕ್ತ ಎಸ್.ಪಿ ನೇತೃತ್ವದಲ್ಲಿ, ಶಿವಮೊಗ್ಗ, ಹಾವೇರಿ ಮತ್ತು ದಾವಣಗೆರೆಯ ಅಧಿಕಾರಿಗಳನ್ನೊಳಗೊಂಡ ಐದು ಪ್ರತ್ಯೇಕ ತಂಡಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿವೆ.

ಬಳ್ಳಾರಿಯಲ್ಲಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಣ್ಣ ಅವರ ನಿವಾಸದ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಬಳ್ಳಾರಿಯ ಸಿದ್ಧಾರ್ಥ್ ನಗರದಲ್ಲಿರುವ ಅವರ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮಾಡಿದ ದೂರಿನ ಮೇರೆಗೆ ಅಧಿಕಾರಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಶಿವಣ್ಣ ಅವರ ವಿರುದ್ಧ ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿ ಗಳಿಕೆ ಕುರಿತು ಈ ಹಿಂದೆಯೂ ಸರಣಿ ದೂರುಗಳು ಕೇಳಿಬಂದಿದ್ದವು.

ಇನ್ನು ಚಿತ್ರದುರ್ಗದ ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಸುಶೀಲಮ್ಮ ಅವರ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಕೇವಲ ಒಂದು ವರ್ಷದ ಹಿಂದಷ್ಟೇ ಸ್ವಯಂ ನಿವೃತ್ತಿ ಪಡೆದಿದ್ದ ಸುಶೀಲಮ್ಮ ಅವರ ಚಿತ್ರದುರ್ಗದ ಮೇದೇಹಳ್ಳಿ ಬಡಾವಣೆಯ ನಿವಾಸ ಹಾಗೂ ಹಿರಿಯೂರು ತಾಲೂಕಿನ ಯಾದಲಘಟ್ಟ ಗ್ರಾಮದಲ್ಲಿರುವ ತೋಟದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕಡತಗಳನ್ನು ಜಾಲಾಡುತ್ತಿದ್ದಾರೆ.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon