ಧಾರವಾಡ: ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮಂಗಳವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಜಿಲ್ಲೆಯ 24 ಗ್ರಾಪಂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ತೀವ್ರ ತಪಾಸಣೆ ಕೈಗೊಂಡಿದ್ದಾರೆ.
ಇಂದು ಬೆಳಗಿನ ಜಾವ ಯಾವುದೇ ಮುನ್ಸೂಚನೆ ನೀಡದೆ ಧಾರವಾಡ ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳ ತಂಡಗಳು 24 ಗ್ರಾಪಂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಧಾರವಾಡ ಲೋಕಾಯುಕ್ತ ಎಸ್. ಪಿ ಸಿದ್ದಲಿಂಗಪ್ಪ ಎಸ್. ಟಿ. ನೇತೃತ್ವದಲ್ಲಿ ತನಿಖಾ ಕಾರ್ಯಾಚರಣೆ ನಡೆದಿದೆ. ಇವರ ಕಾರ್ಯಕ್ಕೆ ಸಾರ್ವಜನಿಕರ ವಲಯದಲ್ಲಿ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದೆ.
ಪಿಡಿಒ/ ಕಾರ್ಯದರ್ಶಿ 1/ ಕಾರ್ಯದರ್ಶಿ 2/ ಎಸ್.ಡಿ.ಎ/ ಡೇಟಾ ಆಪರೇಟರ್/ ರೆಕಾರ್ಡ್ ಕೀಪರ್ ಇವರ ಕಾರ್ಯಕ್ಷಮತೆಯ ಪರಿಶೀಲನೆ ನಡೆಸಲಾಗುತ್ತಿದೆ. 24 ಪಾಯಿಂಟ್ ಬುಕ್/ ಸಾಮಾನ್ಯ ಮಾಹಿತಿಯ ಪುಸ್ತಕಗಳ ಪರಿಶೀಲನೆ ಕೂಡ ನಡೆದಿದೆ. ಪ್ರತಿ ವರ್ಷದ ಆಡಿಟ್ ರಿಪೋರ್ಟ್ ಪರಿಶೀಲನೆ ನಡೆಸಲಾಗುತ್ತಿದೆ. ನಿಯಮಿತ ಅನುದಾನ, ಬಜೆಟ್, ಯೋಜನೆಗಳು, ಗ್ರಾಪಂ ವೆಬ್ ಸೈಟ್ ಗಳು, ಗ್ರಾಪಂ ವರ್ಕ್ ರಜಿಸ್ಟರ್, ಸೋಶಿಯಲ್ ಆಡಿಟ್ ರಿಪೋರ್ಟ್, ಜಂಟಿ ನಿರ್ದೇಶಕರ ಆಡಿಟ್ ರಿಪೋರ್ಟ್, ಕಾಮಗಾರಿಗಳ ಅಂತಿಮ ಆರ್ಡರ್, ಆಡಿಟ್ ರಿಪೋಟ್ ಪ್ರಕಾರ ಗ್ರಾಪಂ ಪಿಡಿಒಗಳಿಂದ ರಾಜ್ಯ ಸರ್ಕಾರಕ್ಕೆ ಸಂದಾಯಯವಾಗಬೇಕಿರುವ ಮೊತ್ತ ಎಷ್ಟು ಎಂಬ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಧಾರವಾಡ ತಾಲೂಕಿನ ಗರಗ, ಹೆಬ್ಬಳ್ಳಿ, ಅಮ್ಮಿನಬಾವಿ, ತಡಕೂಡ, ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ, ಬ್ಯಾಹಟ್ಟಿ, ವರೂರ, ನೂಲ್ವಿ, ನವಲಗುಂದ ತಾಲೂಕಿನ ಯಮನೂರ, ಮೊರಬ, ನಾಯಕನೂರ, ತಡಹಾಳ, ಕುಂದಗೋಳ ತಾಲೂಕಿನ ಗುಡಗೇರಿ, ಯರಗುಪ್ಪಿ, ಸಂಶಿ, ಶಿರೂರ, ಕಲಘಟಗಿ ತಾಲೂಕಿನ ಗ-ಹುಲಕೊಪ್ಪ, ದುಮ್ಮವಾಡ, ಬೇಗೂರ, ಮಿಶ್ರಿಕೋಟೆ, ಅಳ್ನಾವರ ತಾಲೂಕಿನ ಅರವಟಗಿ, ಬೆಣಚಿ, ಹೊನ್ನಾಪುರ, ಕಡಬಗಟ್ಟಿ, ಅಣ್ಣಿಗೇರಿ ತಾಲೂಕಿನ ಶಲವಡಿ, ಭದ್ರಾಪೂರ, ಹಳ್ಳಿಕೇರಿ, ಇಬ್ರಾಹಿಂಪೂರ ಗ್ರಾಮ ಪಂಚಾಯಿತಿ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕೂಡ ನಡೆಯಲಿ ಕಾರ್ಯಾಚರಣೆ:
ಧಾರವಾಡ ಜಿಲ್ಲೆಯಲ್ಲಿ ನಡೆಸಿದಂತೆ ಪಕ್ಕದ ಬೆಳಗಾವಿ ಜಿಲ್ಲೆಯಲ್ಲಿಯೂ ಇದೇ ರೀತಿಯ ಮಿಂಚಿನ ಕಾರ್ಯಾಚರಣೆಗಳು ನಡೆದರೆ ದೊಡ್ಡ ದೊಡ್ಡ ಭ್ರಷ್ಟ ತಿಮಿಂಗಲುಗಳು ಬಲೆಗೆ ಬೀಳುವುದು ಖಚಿತ ಎಂದು ಜನರ ಅಭಿಪ್ರಾಯವಾಗಿದೆ.














