ಹೋರಾಟಗಾರರ, ಸಂಘಟನೆಗಳ ಶ್ರಮದಿಂದ ಒಳಮೀಸಲಾತಿ ಜಾರಿ ಸಾಧ್ಯವಾಯಿತು: ಕೆ.ಹೆಚ್. ಮುನಿಯಪ್ಪ‌

WhatsApp
Telegram
Facebook
Twitter
LinkedIn

ಬೆಂಗಳೂರು: ಎಲ್ಲಾ ಹೋರಾಟಗಾರರ, ಸಂಘಟನೆಗಳ ಶ್ರಮದಿಂದ ಒಳಮೀಸಲಾತಿ ಜಾರಿಗೊಳಿಸಲು ಸಾಧ್ಯವಾಯಿತು. ಈಗ ಪ್ರವರ್ಗ ಎ ಗುಂಪಿಗೆ ಶೇ 5.25, ಬಿ ಗುಂಪಿಗೆ ಶೇ 5.25, ಸಿ ಗುಂಪಿಗೆ ಶೇ 4.5 ಸಿಕ್ಕಿದೆ. ನಾವು ಇದುವರೆಗೂ ಇದ್ದ ಶೇಕಡ 15 ರಲ್ಲಿ 1% ಕೂಡ ಮೀಸಲಾತಿ ಪಡೆಯಲು ಅವಕಾಶ ಇರಲಿಲ್ಲ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಮಾದರ ಮಹಾಸಭಾದ ಅಧ್ಯಕ್ಷ ಕೆ.ಹೆಚ್. ಮುನಿಯಪ್ಪ‌ ತಿಳಿಸಿದರು.

ಭಾನುವಾರ ಕರ್ನಾಟಕ ಮಾದರ ಮಹಾಸಭಾದ  ರಾಜ್ಯ ಕಾರ್ಯಕಾರಣಿ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಸಭೆ ನಗರದ ಅರಮನೆ ಮೈದಾನದ ಗಾಯತ್ರಿ ವಿಹಾದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಲ್ಲಾ ಕ್ಯಾಬಿನೆಟ್ ಸಚಿವರ ಸಂಪುಟ ಸರ್ವಾನುಮತದ ಒಪ್ಪಿಗೆಯಿಂದ ಒಳಮೀಸಲಾತಿ ಜಾರಿಯಾಗಿದೆ. ಇದರಿಂದ ಒಂದನೇ ಹಂತವನ್ನು ಪೂರ್ತಿ ಮಾಡಿದ್ದೇವೆ, ಇನ್ನು ಸಾಕಷ್ಟು ಕೆಲಸಗಳು ಮಾಡುವುದಿದೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ನವರು ನುಡಿದಂತೆ ನಡೆದಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಸಹಕಾರ ಕೂಡ ಬಹಳಷ್ಟಿದೆ. ಇನ್ನು ಡಾ.ಜಿ ಪರಮೇಶ್ವರ್ ರವರು ಪ್ರಣಾಳಿಕೆ ಅಧ್ಯಕ್ಷರಾಗಿ ಒಳಮೀಸಲಾತಿಯನ್ನು ಜಾರಿ ಮಾಡಲು ಸಹಕರಿಸಿದ್ದಾರೆ. ಕಾನೂನು ಸಚಿವ ಹೆಚ್.ಕೆ ಪಾಟೀಲ್ ಮತ್ತು ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಅವರುಗಳ ಸಹಕಾರ ಕೂಡ ಬಹಳಷ್ಟಿದೆ ಎಂದು ನುಡಿದರು.

ಇಲ್ಲಿಯವರೆಗೂ ಭಿನ್ನಾಭಿಪ್ರಾಯಗಳು ಏನಿತ್ತು ಅದನ್ನು ಮರೆತು 101 ಜಾತಿಗಳು ಒಟ್ಟಿಗೆ ಇರೋಣ. 101 ಜಾತಿಗಳ ಅಭಿವೃದ್ಧಿಗೆ ನಾವೆಲ್ಲರೂ ಒಟ್ಟಾಗಿ ದುಡಿಯೋಣ. ಭೇದ ಭಾವಗಳನ್ನು ಬಿಟ್ಟು ಒಗ್ಗಟ್ಟಾಗಿದ್ದಾಗ, ಶೋಷಿತ ವರ್ಗದ ಎಲ್ಲರೂ ಕೂಡ ಒಟ್ಟಾಗಿ ಬಾಳಿ ಬದುಕಿದಾಗ ಅವರ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ. ನಾವೆಲ್ಲರೂ ಒಳಮೀಸಲಾತಿಯ ಐತಿಹಾಸಿಕ ತೀರ್ಮಾನವನ್ನು ಸ್ವಾಗತಿಸಬೇಕು ಮತ್ತು ಅದರ ಲಾಭವನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕು ಎಂದು ಕರೆ ನೀಡಿದರು.

ಈ ತಿಂಗಳ ಕೊನೆಗೆ ಅಂದರೆ ಮೇ 30ರ ಒಳಗಾಗಿ ಮಹಾಸಭಾದ ಎಲ್ಲಾ ಜಿಲ್ಲಾ ಸಮಿತಿಗಳು ಮತ್ತು ತಾಲ್ಲೂಕು ಸಮಿತಿಗಳು ಕಡ್ಡಾಯವಾಗಿ ರಚನೆಯಾಗಬೇಕು.ಇದರಲ್ಲಿ ಯಾವುದೇ ವಿಳಂಬ ಬೇಡ. ಪ್ರತಿಯೊಬ್ಬ ಕಾರ್ಯಕಾರಿಣಿ ಸದಸ್ಯರು ಕನಿಷ್ಠ 50 ಹೊಸ ಸದಸ್ಯರನ್ನು ಈ ಸಂಘಟನೆಗೆ ಸೇರಿಸುವ ಜವಾಬ್ದಾರಿ ಹೊರಬೇಕು. ಆ ಮೂಲಕ ರಾಜ್ಯಾದ್ಯಂತ ನಾವು ಲಕ್ಷಾಂತರ ಸದಸ್ಯರನ್ನು ಹೊಂದುವಂತಾಗಬೇಕು. ಜೂನ್ 14ನೇ ರ ಭಾನುವಾರ ಬೃಹತ್ ಮಟ್ಟದ ಸಭೆಯನ್ನು ಬೆಂಗಳೂರಿನಲ್ಲಿ ಆಯೋಜಿಸೋಣ. ಆ ಸಭೆಯ ಮೂಲಕ ನಮ್ಮ ಶಕ್ತಿಯನ್ನು ಪ್ರದರ್ಶಿಸೋಣ ಎಂದರು.

ನಮ್ಮ ಈ ಮಹಾಸಭಾದ ಅಥವಾ ಸಂಘಟನೆಯ ಮುಖ್ಯ ಉದ್ದೇಶ ಕೇವಲ ರಾಜಕಾರಣವಲ್ಲ. ಬದಲಾಗಿ ಬಡವರ ಮಕ್ಕಳನ್ನು, ಪೌರ ಕಾರ್ಮಿಕರ ಮಕ್ಕಳನ್ನು ಉತ್ತಮವಾಗಿ ಓದಿಸಿ ಅವರನ್ನು ದೊಡ್ಡ ಮಟ್ಟದ ಅಧಿಕಾರಿಗಳನ್ನಾಗಿ, ಡಾಕ್ಟರ್, ಇಂಜಿನಿಯರ್, ಐಎಎಸ್, ಕೆಎಎಸ್ ಮಾಡುವಂತದ್ದು. ಅವರಿಗೆ ಶಿಕ್ಷಣದ ಹಕ್ಕನ್ನು ಮತ್ತು ಉದ್ಯೋಗದ ಅವಕಾಶವನ್ನು ಒದಗಿಸಿಕೊಡುವುದು ನಮ್ಮ ಮೊದಲ ಆದ್ಯತೆಯಾಗಿದೆ.

ನಮಗೆ ಸ್ವಾಭಿಮಾನವಾಗಿ ಬದುಕುವುದಕ್ಕೆ ಇವತ್ತು ಒಂದು ದೊಡ್ಡ ಅವಕಾಶ ಸಿಕ್ಕಿದೆ. ಇತಿಹಾಸದ ಪುಟಗಳಲ್ಲಿ ಈ ನಿರ್ಧಾರಕ್ಕಾಗಿ ಮುಖ್ಯಮಂತ್ರಿಗಳು ಮತ್ತು ಪಕ್ಷದ ಅಧ್ಯಕ್ಷರು ಅಜರಾಮರಾಗಿ ಉಳಿಯಲಿದ್ದಾರೆ. ನಾವೆಲ್ಲರೂ ಒಟ್ಟಾಗಿ, ಭಿನ್ನಾಭಿಪ್ರಾಯ ಮರೆತು ಈ ಶೋಷಿತ ವರ್ಗದ ಏಳಿಗೆಗಾಗಿ, ಸಮುದಾಯದ ಏಳಿಗೆಗಾಗಿ ಶ್ರಮಿಸೋಣ ಎಂದು ಕೆ.ಹೆಚ್. ಮುನಿಯಪ್ಪ‌ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾದರ ಚನ್ನಯ್ಯ ಸ್ವಾಮೀಜಿ, ಸಿದ್ದರಾಜು ಸ್ವಾಮೀಜಿ, ಆನಂದ ಮುನಿ ಸ್ವಾಮೀಜಿ, ಶಡಕ್ಷರಿ ಮುನಿ ಸ್ವಾಮೀಜಿ, ಮಾಜಿ ಸಂಸದ ಎಲ್.ಹನುಮಂತಯ್ಯ, ಚಂದ್ರಪ್ಪ, ನಿಗಮದ ಅಧ್ಯಕ್ಷ ಮಂಜುನಾಥ್, ಮಾಜಿ ಸಚಿವ ಕೋಟೆ ಶಿವಣ್ಣ, ನಿವೃತ್ತ ಐಎಎಸ್ ಅಧಿಕಾರಿಗಳಾದ ಗೋನಾಳು ಭೀಮಪ್ಪ, ತೇಗನೂರು, ಮುಖಂಡರುಗಳಾದ ಸುಬ್ಬಣ, ಶಿವಪ್ಪ, ವಿಶ್ವನಾಥ್, ಶ್ರೀನಿವಾಸ್ ಸೇರಿದಂತೆ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು, ಸದಸ್ಯರು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon