ಬೆಂಗಳೂರು: ಕೆಂಪೇಗೌಡರು ದೂರದೃಷ್ಟಿಯುಳ್ಳ ಆಡಳಿತಗಾರ, ನಗರ ನಿರ್ಮಾತೃ, ಪರಿಸರವಾದಿ ಮತ್ತು ಸಮಾಜ ಸುಧಾರಕರಾಗಿದ್ದರು. ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಬಣ್ಣಿಸಿದರು.
ಶನಿವಾರ ಜ್ಞಾನತ್ಯೋತಿ ಸಭಾಂಗಣದಲ್ಲಿ ನಡೆದ ನಾಡಪ್ರಭು ಶ್ರೀ ಕೆಂಪೇಗೌಡರ 517ನೇ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಂಪೇಗೌಡರನ್ನು ಕೇವಲ ಒಬ್ಬ ಆಡಳಿತಗಾರನಾಗಿ ಮಾತ್ರವಲ್ಲದೆ, ಜನರ ಕಲ್ಯಾಣಕ್ಕಾಗಿ ದೂರದೃಷ್ಟಿಯಿಂದ ಆಡಳಿತ ನಡೆಸಿದ ನಾಯಕನಾಗಿ ಸ್ಮರಿಸಲಾಗುತ್ತದೆ. ರೈತರು, ವ್ಯಾಪಾರಿಗಳು, ಕುಶಲಕರ್ಮಿಗಳು, ವಿದ್ವಾಂಸರು ಮತ್ತು ವಿವಿಧ ಧರ್ಮಗಳ ಜನರು ಒಟ್ಟಾಗಿ ಬದುಕುವ ಮತ್ತು ಅಭಿವೃದ್ಧಿ ಹೊಂದಬಲ್ಲ ನಗರವನ್ನು ಕೆಂಪೇಗೌಡರು ಕಲ್ಪಿಸಿಕೊಂಡಿದ್ದರು. ಇಂದಿನ ಬೆಂಗಳೂರು ನಿಜಕ್ಕೂ ಮಿನಿ ಭಾರತದ ರೂಪದಲ್ಲಿ ರೂಪಗೊಂಡಿರುವ ಅವರ ದೂರದೃಷ್ಟಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವ್ಯವಸ್ಥಿತ ಮಾರುಕಟ್ಟೆಗಳು, ಬಡಾವಣೆಗಳು, ಜಲಮೂಲಗಳು ಮತ್ತು ಸಾರ್ವಜನಿಕ ಸ್ಥಳಗಳ ಮೂಲಕ ಅವರು ಯೋಜಿತ ನಗರಾಭಿವೃದ್ಧಿಗೆ ಅಡಿಪಾಯ ಹಾಕಿದ್ದರು. ಕೆಂಪೇಗೌಡರು ನಿರ್ಮಿಸಿದ ಕೆರೆಗಳು ಮತ್ತು ಕಾಲುವೆಗಳ ಜಾಲ, ಜೊತೆಗೆ ಬೃಹತ್ ಪ್ರಮಾಣದ ಮರಗಳನ್ನು ನೆಡುವ ಕಾರ್ಯವು, ಸುಸ್ಥಿರ ಅಭಿವೃದ್ಧಿಯ ಬಗ್ಗೆ ಭಾರತದ ಪ್ರಾಚೀನ ಜ್ಞಾನವನ್ನು ಪ್ರದರ್ಶಿಸುತ್ತದೆ. ನೀರಿನ ಅಭಾವ ಮತ್ತು ಹವಾಮಾನ ಬದಲಾವಣೆಯಂತಹ ಇಂದಿನ ಸವಾಲುಗಳನ್ನು ಎದುರಿಸಲು ಅಮೂಲ್ಯವಾದ ಪಾಠಗಳನ್ನು ನೀಡುತ್ತದೆ ಎಂದರು.
ಸಮಾಜ ಸುಧಾರಣೆ, ಸಾಂಸ್ಕೃತಿಕ ಸಾಮರಸ್ಯ ಮತ್ತು ಮಾನವ ಘನತೆಯ ಬಗೆಗಿನ ಕೆಂಪೇಗೌಡರ ಬದ್ಧತೆ ಅವರದ್ದಾಗಿತ್ತು. ಕೆಂಪೇಗೌಡರು ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಅಪ್ಪಿಕೊಂಡಿದ್ದರು. ಒಂದು ಮಹಾನ್ ನಗರವು ಶಿಕ್ಷಣ, ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಪೋಷಿಸಬೇಕು ಎನ್ನುವುದು ಅವರ ನಂಬಿಕೆಯಾಗಿತ್ತು ಎಂದು ನುಡಿದರು.
ಬೆಂಗಳೂರು ಭಾರತದ ತಂತ್ರಜ್ಞಾನ ಮತ್ತು ನಾವೀನ್ಯತೆಯ ರಾಜಧಾನಿಯಾಗಿ ಹೊರಹೊಮ್ಮಿದ್ದು, ಇದರ ಯಶಸ್ಸು ಸುಮಾರು ಐದು ಶತಮಾನಗಳ ಹಿಂದೆ ಕೆಂಪೇಗೌಡರು ಹಾಕಿಕೊಟ್ಟ ಬಲವಾದ ಅಡಿಪಾಯದ ಮೇಲೆ ನಿಂತಿದೆ. ದೀರ್ಘಕಾಲೀನ ಯೋಜನೆ, ಸುಸ್ಥಿರತೆ ಮತ್ತು ಸಂಸ್ಥೆಗಳ ನಿರ್ಮಾಣದ ಕುರಿತ ಕೆಂಪೇಗೌಡರ ಆದರ್ಶಗಳು ವಿಕಸಿತ ಭಾರತದ ದೃಷ್ಟಿಕೋನದತ್ತ ಭಾರತದ ಪಯಣಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದು ತಿಳಿಸಿದರು.
ಯುವಜನರು ಕೆಂಪೇಗೌಡರ ಜೀವನದಿಂದ ಸ್ಫೂರ್ತಿ ಪಡೆಯಬೇಕು, ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅರ್ಥಪೂರ್ಣ ಕೊಡುಗೆ ನೀಡಬೇಕು. ಜಲ ಸಂರಕ್ಷಣೆಯ ಮಹತ್ವವನ್ನು ತಿಳಿಯಬೇಕು, ದೇಶಾದ್ಯಂತ ರೈತರ ಅನುಕೂಲಕ್ಕಾಗಿ ಜಲ ಸಂಪನ್ಮೂಲಗಳನ್ನು ಸೂಕ್ತವಾಗಿ ಬಳಸಿಕೊಳ್ಳಲು ನದಿಗಳ ಜೋಡಣೆಯ ಅಗತ್ಯತೆಯನ್ನು ಮನಗಾಣಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್. ಡಿ. ಕುಮಾರಸ್ವಾಮಿ, ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ. ಎನ್. ಅಶ್ವತ್ಥನಾರಾಯಣ, ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ನಾಡಪ್ರಭು ಕೆಂಪೇಗೌಡ ಫೌಂಡೇಶನ್‌ನ ಅಧ್ಯಕ್ಷ ಪ್ರೊ. ಎಂ. ಕೃಷ್ಣೇಗೌಡ, ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮೊದಲಾದವರು ಉಪಸ್ಥಿತರಿದ್ದರು.














