ಬೆಂಗಳೂರು: ಲ್ಯಾಟರಲ್ ಎಂಟ್ರಿ ಮೂಲಕ ಎಂಜಿನಿಯರಿಂಗ್ 2ನೇ ವರ್ಷ ಅಥವಾ 3ನೇ ಸೆಮಿಸ್ಟರ್ ಗೆ ಪ್ರವೇಶ ಪಡೆಯಲು ಡಿಸಿಇಟಿಗೆ ಅರ್ಜಿ ಸಲ್ಲಿಸಿರುವ ಡಿಪ್ಲೊಮಾ ಅಭ್ಯರ್ಥಿಗಳು, ಮೀಸಲಾತಿ ಸೇರಿದಂತೆ ಸಣ್ಣ ಪುಟ್ಟ ತಪ್ಪುಗಳ ತಿದ್ದುಪಡಿಗೆ ಮೇ 20ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ಕಲ್ಪಿಸಿದೆ.
ಅಭ್ಯರ್ಥಿಗಳು ಮೇ 20ರವರೆಗೆ ಲಾಗಿನ್ ಆಗಿ ತಮ್ಮ ಅರ್ಜಿಯಲ್ಲಿ ಏನಾದರು ಬದಲಾವಣೆ ಅಗತ್ಯ ಇದ್ದರೆ ಮಾಡಿಕೊಳ್ಳಬಹುದು. ರಕ್ಷಣೆ, ಮಾಜಿ ಸೈನಿಕ, ಸಿಆರ್ ಪಿಎಫ್ ಸೇರಿದಂತೆ ಇತರ ವಿಶೇಷ ಕ್ಯಾಟರಿಗಳಲ್ಲಿ ಅರ್ಹತೆ ಇದ್ದು ಕ್ಲೇಮ್ ಮಾಡಿರುವ ಬಗ್ಗೆ ಅಭ್ಯರ್ಥಿಗಳು ಖಚಿತಪಡಿಸಿಕೊಳ್ಳಬಹುದು. ಕ್ಲೇಮ್ ಮಾಡಿದ್ದಲ್ಲಿ ಪ್ರಮಾಣ ಪತ್ರಗಳನ್ನು ಸಲ್ಲಿಸಬಹುದು. ಮೀಸಲಾತಿ ಸಂಬಂಧದ ಆರ್ ಡಿ ಸಂಖ್ಯೆ ನಮೂದಿಸುವುದನ್ನು ಕೂಡ ಖಚಿತಪಡಿಸಿಕೊಳ್ಳಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಒಳಮೀಸಲಾತಿ ಆರ್ ಡಿ ಸಂಖ್ಯೆ ನಮೂದಿಸಿ:
ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಆರ್ ಡಿ ಸಂಖ್ಯೆ ಇರುವ ಪ್ರವರ್ಗ-ಎ, ಪ್ರವರ್ಗ- ಬಿ ಮತ್ತು ಪ್ರವರ್ಗ-ಸಿ ಎಂದು ಮುದ್ರಿತವಾಗಿರುವ ಪ್ರಮಾಣ ಪತ್ರಗಳನ್ನು ಸಂಬಂಧಿಸಿದ ತಹಶೀಲ್ದಾರ್ ರಿಂದ ಪಡೆದು, ಅದರ ಆರ್.ಡಿ ಸಂಖ್ಯೆಯನ್ನು ದಾಖಲಿಸುವುದಕ್ಕೂ ಅವಕಾಶ ನೀಡಲಾಗಿದೆ. ಇಂತಹ ಅಭ್ಯರ್ಥಿಗಳ ಅನುಕೂಲಕ್ಕಾಗಿ ಪೋರ್ಟಲ್ ಅನ್ನು ಮೇ 22ರವರೆಗೂ ತೆರೆಯಲಾಗಿದೆ. ಕೆಲವರು ಒಳ ಮೀಸಲಾತಿ ಪ್ರಕಾರ ಪ್ರಮಾಣ ಪತ್ರ ಸಲ್ಲಿಸದೆ, ಹಳೇ ಆರ್ ಡಿ ಸಂಖ್ಯೆಯನ್ನೇ ಅರ್ಜಿಯಲ್ಲಿ ದಾಖಲಿಸುತ್ತಿದ್ದು, ಅಂತಹವರು ತಿದ್ದುಪಡಿ ಮೂಲಕ ಹೊಸದಾಗಿ ಸಂಖ್ಯೆಯನ್ನು ನಮೂದಿಸಬೇಕು ಎಂದು ತಿಳಿಸಿದ್ದಾರೆ.















