ಬೆಂಗಳೂರು: ರಾಜಕೀಯದಲ್ಲಿ ಕುಮಾರಸ್ವಾಮಿ ಗಿಂತ ಹೆಚ್ಚಿನ ಅನುಭವವಿದೆ. ನಾನು ಸಿಎಂ ಆಗದೇ ಇರಬಹುದು, ಆದರೆ ಆಡಳಿತ ವಿಚಾರದಲ್ಲಿ ಹೆಚ್ಚು ಅನುಭವ ಹೊಂದಿದ್ದೇನೆ. ಆದ್ದರಿಂದ ಅವರಿಂದ ಕಲಿಯುವ ಅಗತ್ಯ ನನಗಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳು ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ನಡೆಸಿದ ಸಭೆಗೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, ನಾನು ಬಹಳ ಕಾಲ ಸಚಿವನಾಗಿ ಕೆಲಸ ಮಾಡಿದ್ದೇನೆ. ಆಡಳಿತ ಹೇಗೆ ಮಾಡಬೇಕು, ಯಾರ ಜೊತೆ ಸಭೆ ಮಾಡಬೇಕು, ಮಾಡಬಾರದು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು.














