ಬೆಂಗಳೂರು: ಒಕ್ಕಲಿಗ ಸಮುದಾಯದಲ್ಲಿ ಉಂಟಾಗಿರುವ ಅಸಮತೋಲನಗಳನ್ನು, ಜಾತಿ ಗಣತಿ ವಿಚಾರದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಸರ್ಕಾರದ ಗಮನಕ್ಕೆ ತರಲಾಗುತ್ತದೆ ಎಂದು ಕುಣಿಗಲ್ ಕ್ಷೇತ್ರದ ಶಾಸಕ ಎಚ್.ಡಿ ರಂಗನಾಥ್ ಹೇಳಿದರು.
ಶುಕ್ರವಾರ ಖಾಸಗಿ ಹೋಟೆಲ್ ನಲ್ಲಿ ನಡೆದ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಪ್ರಮುಖ ನಾಯಕರ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮುದಾಯದ ಪ್ರಮುಖರು ಹಾಗೂ ಪದಾಧಿಕಾರಿಗಳು ಒಗ್ಗೂಡಿ ಸಭೆ ನಡೆಸಿ ಸಕಾರಾತ್ಮಕವಾಗಿ ಚರ್ಚಿಸಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮುದಾಯದ ಪ್ರಮುಖ ನಾಯಕರಾಗಿರುವ ಹಿನ್ನೆಲೆಯಲ್ಲಿ ಎಲ್ಲ ಪದಾಧಿಕಾರಿಗಳು ಸೇರಿ ಅವರಿಗೆ ವಿಶೇಷ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದ್ದಾರೆ. ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ದಿನಾಂಕವನ್ನು ನಿಗದಿಪಡಿಸಿಕೊಂಡು ಕಾರ್ಯಕ್ರಮದ ರೂಪುರೇಷೆಗಳನ್ನು ಪ್ರಕಟಿಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಜಾತಿ ಗಣತಿ ವರದಿ ಕುರಿತು ಮಾತನಾಡಿದ ಅವರು, ಕಾಂತರಾಜು ವರದಿ ಹಾಗೂ ತದನಂತರದ ವರದಿಗಳಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಅನ್ಯಾಯವಾಗಿದೆ ಎನ್ನುವ ಚರ್ಚೆಗಳು ಈಗಲೂ ನಡೆಯುತ್ತಿವೆ. ಈ ಕಾರಣದಿಂದಲೇ ವರದಿ ಸಲ್ಲಿಕೆಗೆ ತುಸು ವಿಳಂಬವಾಗಿತ್ತು. ಪ್ರಸ್ತುತ ಹೈಕೋರ್ಟ್‌ನಿಂದಲೂ ಕೆಲವು ಸೂಚನೆಗಳು ಬಂದಿದ್ದು, ವರದಿಯನ್ನು ಬಹಿರಂಗಪಡಿಸದಂತೆ ತಿಳಿಸಲಾಗಿದೆ ಎಂದರು.
ಯಾವ ಸಮುದಾಯಕ್ಕೂ ಅನ್ಯಾಯವಾಗಬಾರದು ಎನ್ನುವುದು ಜಾತ್ಯತೀತ ಚಿಂತನೆಯಾಗಿದೆ. ನಮ್ಮ ಸಮುದಾಯದ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಅಭಿವೃದ್ಧಿಗೆ ಶ್ರಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಅರ್ಥಪೂರ್ಣವಾಗಿ ಮುನ್ನಡೆಯುವ ನಿಟ್ಟಿನಲ್ಲಿ ನನ್ನ ಬೆಂಬಲ ಸದಾ ಇರಲಿದೆ ಎಂದು ಎಚ್.ಡಿ ರಂಗನಾಥ್ ತಿಳಿಸಿದರು.















