ಬೆಂಗಳೂರು/ಬೆಳಗಾವಿ: ರಾಜ್ಯದ ಗ್ರಾಮೀಣಾಭಿವೃದ್ಧಿ ವ್ಯವಸ್ಥೆಯ ಬೆನ್ನೆಲುಬಾಗಿರುವ ಗ್ರಾಮ ಪಂಚಾಯಿತಿಗಳು ಹಿಂದೆಂದೂ ಕಾಣದಂತಹ ಆರ್ಥಿಕ ಮತ್ತು ಆಡಳಿತಾತ್ಮಕ ಬಿಕ್ಕಟ್ಟನ್ನು ಎದುರಿಸುತ್ತಿವೆ. ರಾಜ್ಯದ 5,950 ಗ್ರಾಮ ಪಂಚಾಯಿತಿಗಳ ಕಾರ್ಯನಿರ್ವಹಣೆ ಅನುದಾನದ ಕೊರತೆಯಿಂದಾಗಿ ಸಂಪೂರ್ಣ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದೆ ಎಂದು ಬೆಳಗಾವಿ ಘಟಕದ ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಉನ್ನತೀಕರಣ ಸಂಘ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.
ಗ್ರಾಮ ಪಂಚಾಯಿತಿಗಳು ತಮ್ಮ ದೈನಂದಿನ ಅನಿವಾರ್ಯ ವೆಚ್ಚಗಳಿಗಾಗಿ 15ನೇ ಹಣಕಾಸು ಯೋಜನೆಯಡಿಯ ಟೈಡ್ ಮತ್ತು ಅನ್-ಟೈಡ್ಅ ನುದಾನವನ್ನೇ ಅವಲಂಬಿಸಿವೆ. ಕಳೆದ ಒಂದು ವರ್ಷದಿಂದ ಈ ಅನುದಾನವು ಸಮರ್ಪಕವಾಗಿ ಬಿಡುಗಡೆಯಾಗದ ಕಾರಣ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಮೋಟಾರ್ ರಿಪೇರಿ. ಪೈಪ್‌ಲೈನ್ ಅಳವಡಿಕೆ ಮತ್ತು ಬೀದಿ ದೀಪಗಳ ನಿರ್ವಹಣೆಗೆ ಹಣವಿಲ್ಲದೆ ಆಡಳಿತ ಯಂತ್ರ ಸ್ಥಗಿತಗೊಂಡತಗಿದೆ ಎಂದಿದೆ.
ರಾಜ್ಯದ ಸುಮಾರು 70% ಗ್ರಾಮ ಪಂಚಾಯಿತಿಗಳು ಕಳೆದ ಒಂದು ವರ್ಷದಿಂದ ಸುಮಾರು 20 ಲಕ್ಷ ರೂಪಾಯಿಗಳವರೆಗೆ ಬಾಕಿ ಬಿಲ್ ಗಳನ್ನು ಹೊಂದಿವೆ. ಸಾರ್ವಜನಿಕ ಹಿತದೃಷ್ಟಿಯಿಂದ ಪಿಡಿಒಗಳು ಸ್ಥಳೀಯ ಏಜೆನ್ಸಿಗಳಿಂದ ಸಾಲದ ರೂಪದಲ್ಲಿ ಸಾಮಗ್ರಿಗಳನ್ನು ಪಡೆದು ಸೇವೆ ನೀಡಿದ್ದಾರೆ. ಆದರೆ ಈಗ ಹಳೆಯ ಬಾಕಿ ಪಾವತಿಯಾಗದ ಕಾರಣ ಯಾವುದೇ ಸರಬರಾಜು ಏಜೆನ್ಸಿಗಳು ಹೊಸ ಸಾಮಗ್ರಿಗಳನ್ನು ನೀಡಲು ಮುಂದೆ ಬರುತ್ತಿಲ್ಲ. ಇದು ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳ ನಿರ್ವಹಣೆಗೆ ದೊಡ್ಡ ಅಡ್ಡಿಯಾಗಿದೆ ಎಂದು ಅಳಲು ತೊಂಡಿಕೊಂಡಿದೆ.
ಕುಡಿಯುವ ನೀರು ಮತ್ತು ಬೀದಿ ದೀಪದಂತಹ ಸಮಸ್ಯೆಗಳು ತಲೆದೂರಿದಾಗ, ಅನುದಾನವಿಲ್ಲದ ಕಾರಣ ಕೆಲಸ ವಿಳಂಬವಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ನೇರವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಲವು ಕಡೆಗಳಲ್ಲಿ ಬಿಲ್ ಪಾವತಿಸುವಂತೆ ಪಿಡಿಒಗಳ ಮೇಲೆ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಏಜೆನ್ಸಿಗಳು ತೀವು ಒತ್ತಡ ಹಾಗೂ ಬೆದರಿಕೆಗಳನ್ನು ಹಾಕುತ್ತಿರುವುದು ಅಧಿಕಾರಿಗಳ ಮಾನಸಿಕ ನೆಮ್ಮದಿಯನ್ನು ಕೆಡಿಸಿದೆ. ಈ ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವುದು ಅಸಾಧ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ಸರ್ಕಾರದ ವಿಳಂಬ ನೀತಿಯಿಂದಾಗಿ ಅಧಿಕಾರಿಗಳು ಕಾನೂನು ಕ್ರಮಕ್ಕೆ ಗುರಿಯಾಗುವ ಆತಂಕದಲ್ಲಿದ್ದಾರೆ. ಬಾಕಿ ಇರುವ ಕುಡಿಯುವ ನೀರಿನ ಸಾಮಗ್ರಿಗಳ ವೆಚ್ಚ ಮತ್ತು ಸ್ವಚ್ಛತಾ ಬಿಲ್ ಭರಿಸಲು ತಕ್ಷಣವೇ ಪರ್ಯಾಯವಾಗಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಬೇಕು. ವಿಶೇಷ ಮಾರ್ಗಸೂಚಿ ಮತ್ತು ವಿನಾಯಿತಿ ಅನುದಾನ ವಿಳಂಬವಾದ ಅವಧಿಯಲ್ಲಿ ಸಾರ್ವಜನಿಕ ಸೇವೆಗಾಗಿ ನಿರ್ವಹಿಸಲಾದ ತುರ್ತು ವೆಚ್ಚಗಳನ್ನು ಪಾವತಿಸಲು ಕೆ.ಟಿ.ಪಿ.ಪಿ ಕಾಯ್ದೆಯ ಸೆಕ್ಷನ್ ನ ಒಂದು ಅವಧಿಗೆ ಮಾತ್ರ ವಿಶೇಷ ವಿನಾಯಿತಿ ನೀಡಿ ಇಲಾಖೆಯಿಂದ ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು ಎಂದು ಕೋರಿದೆ.
ಪಿಡಿಒ ಅವರು ಹಿತರಕ್ಷಣೆ ಅಧಿಕೃತವಾಗಿ ಸಾಮಗ್ರಿ ಪಡೆದು ಕೆಲಸ ನಿರ್ವಹಿಸಿದ ಅಧಿಕಾರಿಗಳ ಮೇಲೆ ಯಾವುದೇ ಕಾನೂನಾತ್ಮಕ ದೂರುಗಳು ಅಥವಾ ಆಡಿಟ್ ಆಕ್ಷೇಪಣೆಗಳು ಬರದಂತೆ ಇಲಾಖೆಯು ಪೂರ್ಣ ರಕ್ಷಣೆ ನೀಡಬೇಕು ಮತ್ತು ಬೆದರಿಕೆ ಹಾಕುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಬೇಕು ಎಂದು ಸಂಘ ವಿನಂತಿಸಿದೆ.
ಈ ಕುರಿತು ಬೆಳಗಾವಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತ್ ರಿಗೆ ಸಂಘದ ಪದಾಧಿಕಾರಿಗಳಾದ ಶ್ರೀಧರ ಬಿರಾದಾರ, ಲೀಲಾ ಮೇತ್ರಿ, ಪಾರ್ವತಿ ಜಾಧವ, ಸುರೇಶ ಗುಬಗಲಿ, ವಿವೇಕ ಈ ಗುರನ, ವಸಂತ ಕುಮಾರಿ ಕೆ, ಕಲ್ಯಾಣಿ ಅಬಗಲೆ, ಆರತಿ ಟಿ ಗೌರಣ್ಣ ಮನವಿಯನ್ನು ಕೂಡ ಸಲ್ಲಿಸಿದ್ದಾರೆ.















