ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡಗಳು(ದ) ವಿಭಾಗದ ಉಪ ಮುಖ್ಯ ಇಂಜಿನಿಯರ್(ಆಡಳಿತ) ಎಸ್.ವಿ ಸುರೇಂದ್ರನಾಥ್ ಹಾಗೂ ಮುಖ್ಯ ಲೆಕ್ಕಾಧಿಕಾರಿಯಾದ ಕೆ. ನಾರಾಯಣಪ್ಪ ಅವರುಗಳ ಬೀಳ್ಕೊಡುಗೆ ಸಮಾರಂಭ ಮುಖ್ಯ ಅಭಿಯಂತರರ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆಯಿತು.
ಈ ವೇಳೆ ಎಸ್.ವಿ ಸುರೇಂದ್ರನಾಥ್ ಅವರು ಮಾತನಾಡಿ, 1993 ರಲ್ಲಿ ಲೋಕೋಪಯೋಗಿ ಇಲಾಖೆಯ ಸೇವೆಗೆ ಸೇರ್ಪಡೆಯಾದೆ. ಅದಕ್ಕೂ ಮೊದಲು ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೆ. ಸರ್ಕಾರಿ ಕೆಲಸಕ್ಕೆ ಸೇರಿದ ಮೊದ ಮೊದಲು ನನಗೆ ಕಾರ್ಯವೈಖರಿಯಲ್ಲಿನ ವ್ಯತ್ಯಾಸದಿಂದ ಅಷ್ಟು ತೃಪ್ತಿ ಇರಲಿಲ್ಲ. ಆದರೆ ಅಂದಿನ ಉನ್ನತಾಧಿಕಾರಿಗಳ ಸಹಕಾರ ಹಾಗೂ ಸಹೋದ್ಯೋಗಿಗಳು ಚಿಕ್ಕ ಡ್ರೈನೇಜ್ ಕಟ್ಟುವ ಕೆಲಸದಿಂದ ದೊಡ್ಡ ಸೇತುವೆ ಕಟ್ಟುವ ಕಾರ್ಯವನ್ನು ಲೋಕೋಪಯೋಗಿ ಇಲಾಖೆಯ ಸಾರ್ವಜನಿಕ ಸೇವೆ ಖಾಸಗಿ ಕೆಲಸಕ್ಕಿಂತ ವಿಭಿನ್ನ ಎಂದು ಮನದಟ್ಟು ಮಾಡಿಸಿದರು. ಆದ್ದರಿಂದ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡು 33 ವರ್ಷಗಳ ಸೇವಾವಧಿಯನ್ನು ಪೂರೈಸಿದ್ದೇನೆ ಎಂದರು.
ಈ ಕೆಲಸ ನಮ್ಮದಲ್ಲ, ಇದು ಸಣ್ಣ ಕೆಲಸ ದೊಡ್ಡ ಕೆಲಸವೆಂದು ಪರಿಗಣಿಸದೆ ಸೇವೆಯ ಮನೋಭಾವವನ್ನು ಬೆಳೆಸಿಕೊಂಡು ಕೆಲಸ ನಿರ್ವಹಿಸಿದರೆ ಸಂತೃಪ್ತಿ ದೊರೆಯುತ್ತದೆ. ಸೌಜನ್ಯ ಮತ್ತು ಸರಳತೆಯನ್ನು ರೂಢಿಸಿಕೊಂಡರೆ ಇನ್ನಷ್ಟು ಉನ್ನತ ಮಟ್ಟದಲ್ಲಿ ಬೆಳೆಯುವ ಅವಕಾಶ ಇರುತ್ತದೆ. ಸಾರ್ವಜನಿಕರ ಕಷ್ಟ ಸುಖಗಳನ್ನು ಆಲಿಸುವುದು ಕೂಡ ಒಂದು ಕಲೆಯಾಗಿದ್ದು, ಇವನ್ನೆಲ್ಲ ರೂಢಿಸಿಕೊಂಡು ಕಾರ್ಯನಿರ್ವಹಿಸಿದರೆ ಒಳ್ಳೆಯ ವೃತ್ತಿ ಜೀವನ ನಿಮ್ಮದಾಗುತ್ತದೆ ಎಂದು ಯುವ ಅಭಿಯಂತರರಿಗೆ ಹಾಗೂ ನೌಕರರಿಗೆ ಕಿವಿಮಾತು ಹೇಳಿದರು.
ಕೆ. ನಾರಾಯಣಪ್ಪ ಅವರು ಮಾತನಾಡಿ, ಜೀವನ ನದಿ ನೀರಿನ ಹರಿವಿನ ಮಾದರಿಯಾಗಿದೆ. ಅದು ಹೇಗೆ ಎಲ್ಲಿಗೆ ಕರೆದುಕೊಂಡು ಹೋಗುತ್ತದೋ ಹಾಗೆ ನೆಡೆಯುತ್ತಾ ಸಾಗುವುದು ಇದರ ಸ್ವಾರಸ್ಯವಾಗಿದೆ. ನಿವೃತ್ತಿ ಹೊಸತನಕ್ಕೆ ತೆರೆದುಕೊಳ್ಳುವ ಒಂದು ಅವಕಾಶ ಎನ್ನುವುದು ನನ್ನ ಭಾವನೆಯಾಗಿದೆ. ವೃತ್ತಿ ಜೀವನ ಹಲವು ಸವಾಲಿನ ಜೊತೆ ಜೊತೆಗೆ ತೃಪ್ತಿ ತಂದಿದ್ದು, ಹವ್ಯಾಸವಾಗಿದ್ದ ಸಾಹಿತ್ಯ ಓದು ಬರಹಕ್ಕೆ ಇನ್ನು ಮುಂದೆ ಹೆಚ್ಚು ಸಮಯ ನೀಡುವ ಇಚ್ಚೆ ನನ್ನದಾಗಿದೆ ಎಂದು ತಿಳಿಸಿದರು.
ಮಯೂರ ಪತ್ರಿಕೆಯ ಸಂಪಾದಕರಾದ ರಘುನಾಥ್ ಚ. ಹಾ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಇಬ್ಬರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗೌರವಿಸಿ ಆತ್ಮೀಯವಾಗಿ ಗೌರವಿಸಿ ಶುಭ ಕೋರಿದರು.















