ಬೆಂಗಳೂರು: ಶಾಂತಿನಗರ ಕಾಂಗ್ರೆಸ್ ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎನ್.ಎ ಹ್ಯಾರಿಸ್ ಮನೆ, ಕಚೇರಿ ಸೇರಿದಂತೆ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹ್ಯಾರಿಸ್ ಅವರ ಅಶೋಕನಗರದ ನಿವಾಸ, ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ನಿವಾಸ ಸೇರಿದಂತೆ ಸುಮಾರು ಐದಕ್ಕೂ ಅಧಿಕ ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದ್ದು, ಪರಿಶೀಲನೆ ಮುಂದುವರೆದಿದೆ.
ರಾಜ್ಯದಲ್ಲಿ ಸಾಕಷ್ಟು ಸುದ್ದಿಯಾಗಿದ್ದ ಬಹುಕೋಟಿ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ, ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೊತೆ ವ್ಯವಹಾರಿಕ ನಂಟು ಹೊಂದಿರುವ ಆರೋಪ ಮೊಹಮ್ಮದ್ ನಲಪಾಡ್ ವಿರುದ್ಧ ಕೇಳಿ ಬಂದಿತ್ತು. ಈ ಕುರಿತು ವಿಶೇಷ ತನಿಖಾ ದಳ ನಲಪಾಡ್ ಅವರನ್ನು ವಿಚಾರಣೆಗೊಳಪಡಿಸಿತ್ತು.
ಬಿಟ್ ಕಾಯಿನ್ ಹಗರಣದಲ್ಲಿ ಕೋಟ್ಯಂತರ ರೂಪಾಯಿ ಹಣದ ವರ್ಗಾವಣೆ ನಡೆದಿದೆ ಎಂಬ ಅನುಮಾನದ ಮೇಲೆ ಎಸ್‌ಐಟಿ ನಲಪಾಡ್‌ಗೆ ನೋಟಿಸ್ ನೀಡಿತ್ತು.ಇದರ ಬೆನ್ನಲ್ಲೇ ಈಗ ಇಡಿ ದಾಳಿ ನಡೆದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.














