ಪೋಕ್ಸೋ ಕಾಯ್ದೆಯ ಕುರಿತು ಎಚ್ಚರಿಕೆಯ ಸಂದೇಶ ಬಿತ್ತರಿಸಬೇಕು: ಡಾ.ಸಿ.ವಿ. ಸ್ನೇಹಾ

WhatsApp
Telegram
Facebook
Twitter
LinkedIn

ಬೆಂಗಳೂರು: ಪೋಕ್ಸೋ ಕಾಯ್ದೆಯ ಮಹತ್ವದ ಕುರಿತು ಆತ್ಯಂತ ಪರಿಣಾಮಕಾರಿಯಾಗಿ ಸಮಾಜದಲ್ಲಿ ಎಚ್ಚರಿಕೆಯ ಸಂದೇಶ ಬಿತ್ತರಿಸಬೇಕು ಎಂದು ಡಾ.ಸಿ.ವಿ. ಸ್ನೇಹಾ ತಿಳಿಸಿದರು.

ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ,  ಜಿಲ್ಲಾ ಪಂಚಾಯ್ತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಪ್ರಕೃತಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಹಕ್ಕುಗಳು ಮತ್ತು ಕಾನೂನುಗಳ ರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ವಿಶೇಷ ತರಬೇತಿ ಶಿಬಿರವನ್ನು ಮಂಗಳವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಡಾ.ಸಿ.ವಿ. ಸ್ನೇಹಾ, ಬಾಲ್ಯ ವಿವಾಹ,  ಬಾಲ ಕಾರ್ಮಿಕ ಮತ್ತು ಬಾಲಗರ್ಭಿಣಿಯರ ಸಮಸ್ಯೆ, ಭ್ರೂಣ ಹತ್ಯೆ, ಭಿಕ್ಷಾಟನೆ ಮತ್ತು ವೇಶ್ಯಾವಾಟಿಕೆಗೆ ಮಕ್ಕಳ ದುರ್ಬಳಕೆ ಇತ್ಯಾದಿ ಸಾಮಾಜಿಕ ಪಿಡುಗುಗಳ ಬಗ್ಗೆ ಜನಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಕೈಜೋಡಿಸಬೇಕು. ಕುಟುಂಬವೂ ಸೇರಿದಂತೆ ಸಮಾಜದ ವಿವಿಧ ಹಂತಗಳಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಹೆಣ್ಣು ಮಕ್ಕಳ ಲೈಂಗಿಕ ಶೋಷಣೆಯನ್ನು ತಡೆಗಟ್ಟಲು ಯುವ ಸಮೂಹ ಸಕ್ರಿಯವಾಗಿ ನೆರವಾಗಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಪ್ರೊ. ರಮೇಶ್.ಬಿ ಮಾತನಾಡಿ, ಕರ್ನಾಟಕದಲ್ಲಿ ಕಳೆದೊಂದು ವರ್ಷದಲ್ಲಿ ಸುಮಾರು 80 ಸಾವಿರ ಬಾಲಗರ್ಭಿಣಿ  ಪ್ರಕರಣಗಳು ಪತ್ತೆಯಾಗಿರುವುದು ಆತಂಕದ ವಿಷಯವಾಗಿದೆ. ಹದಿಹರೆಯದ ಹೆಣ್ಣುಮಕ್ಕಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಆಕರ್ಷಿಸಿ ದುರ್ಬಳಕೆ ಮಾಡಿಕೊಳ್ಳುವ ವಂಚಕರ ಜಾಲದ ಬಗ್ಗೆ  ಸದಾ ಜಾಗೃತರಾಗಿರಬೇಕು. ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳನ್ನು ಸಹಾಯವಾಣಿ ಮೂಲಕ ಸಂಬಂಧಪಟ್ಟ ಇಲಾಖೆ ಮತ್ತು ಪೊಲೀಸರ ಗಮನಕ್ಕೆ ತರುವ ಮೂಲಕ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಲೀಲಾ ಕಲ್ಲಮ್ಮನವರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮಕ್ಕಳ ಕಲ್ಯಾಣ ಸಮಿತಿಯ ನಿಕಟಪೂರ್ವ ಅಧ್ಯಕ್ಷೆ ಮೀನಾ ಜೈನ್ ಮತ್ತು ಎನ್ ಪೋಲ್ಡ್ ಸಂಸ್ಥೆಯ ನಿರ್ದೇಶಕಿ ಖುಷಿ ಕುಶಾಲಪ್ಪ ವಿಶೇಷ ಉಪನ್ಯಾಸ ನೀಡಿದರು.ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಪ್ರೊ.ರಿತಿಕಾ ಸಿನ್ಹಾ ಉಪಸ್ಥಿತರಿದ್ದರು.  ಉಪನ್ಯಾಸಕರಾದ ವಾಣಿಶ್ರೀ ಎಂ. ಕಾರ್ಯಕ್ರಮ ನಿರೂಪಿಸಿದರು. ಡಾ. ವೆಂಕಟೇಶಮೂರ್ತಿ ಸ್ವಾಗತಿಸಿದರು. ಎಂ.ವೀರಪ್ಪ ವಂದಿಸಿದರು. ಮಹೇಂದ್ರ ಎಂ. ಪ್ರತಿಜ್ಞಾವಿಧಿ ಬೋಧಿಸಿದರು.

 

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon