ಬೆಂಗಳೂರು: ಪೂರ್ವ ನಗರ ಪಾಲಿಕೆಯ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬಹು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದೆ ಸುಸ್ಥಿದಾರರಾಗಿರುವ ವಸತಿಯೇತರ ಬಳಕೆಯ ಬ್ಯಾಂಕ್, ಹೋಟೆಲ್, ವಾಣಿಜ್ಯ ಸಂಕೀರ್ಣ ಆಸ್ತಿಗಳನ್ನು ಸೀಲಿಂಗ್ ಮಾಡುವ ಮೂಲಕ ಬಾಕಿದಾರರರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಆಯುಕ್ತ ಡಿ.ಎಸ್.ರಮೇಶ್ ಹೇಳಿದ್ದಾರೆ.
ಒಂದು ಮತ್ತು ಅದಕ್ಕಿಂತಲೂ ಹೆಚ್ಚಿನ ವರ್ಷಗಳ ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಆಸ್ತಿಗಳಿಗೆ ನಿಯಮಾನುಸಾರ ಈಗಾಗಲೇ ನೋಟಿಸ್ ನೀಡಿ ಸಾಕಷ್ಟು ಸಮಯಾವಕಾಶ ನೀಡಿದ್ದರೂ ಸಹಾ, ಆಸ್ತಿ ತೆರಿಗೆ ಪಾವತಿಸಿಲ್ಲ. ಅಂತಹ ಸ್ವತ್ತುಗಳನ್ನು ವಲಯ ಜಂಟಿ ಆಯುಕ್ತೆ ಡಾ. ಕೆ ದಾಕ್ಷಾಯಿಣಿ ನೇತೃತ್ವದಲ್ಲಿ ತಂಡ ರಚಿಸಿ ಉಪ ವಿಭಾಗವಾರು ಅತಿ ಹೆಚ್ಚು ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡಿರುವ ಸ್ವತ್ತುಗಳನ್ನು ಸೀಲಿಂಗ್ ಮಾಡುವ ಮೂಲಕ ತೆರಿಗೆ ವಸೂಲಾತಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಕಟ್ಟಡಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ. ಆದ್ದರಿಂದ ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಆಸ್ತಿ ತೆರಿಗೆ ಪಾವತಿಸಬೇಕು ಎಂದು ಮನವಿ ಮಾಡಿದ್ದಾರೆ.
ಮೂಲಸೌಕರ್ಯ ಅಭಿವೃದ್ಧಿ ಪರಿಶೀಲನಾ ಸಭೆ:
ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ರವರ ಅಧ್ಯಕ್ಷತೆಯಲ್ಲಿ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುರಕ್ಷಾ–75 ಯೋಜನೆಯಡಿ ಪ್ರಮುಖ ಜಂಕ್ಷನ್ ಅಭಿವೃದ್ಧಿ ಕುರಿತು ಪರಿಶೀಲನಾ ಸಭೆಯನ್ನು ಇಂದು ನಡೆಸಲಾಯಿತು ಎಂದು ಹೇಳಿದ್ದಾರೆ.
ಪಿ.ಜಿಗಳ ತಪಾಸಣೆ:
ಕಂದಾಯ ಅಪರ ಆಯುಕ್ತೆ ಪ್ರಜ್ಞಾ ಅಮ್ಮೆಂಬಳ ಅವರ ನೇತೃತ್ವದಲ್ಲಿ ಕಾಡುಗೋಡಿ ವ್ಯಾಪ್ತಿಯಲ್ಲಿರುವ ವೈಟ್ ರೋಸ್ ಲೇಔಟ್, ಎ.ಎಲ್ ಕೋ ಲಿವಿಂಗ್ ಪಿ.ಜಿಯಲ್ಲಿ ತಪಾಸಣೆ ನಡೆಸಲಾಗಿದೆ. ತಪಾಸಣೆ ವೇಳೆಯಲ್ಲಿ ಉದ್ದಿಮೆ ಪರವಾನಗಿ ನವೀಕರಣ ಮಾಡದೇ ಪಿ.ಜಿ ಕಾರ್ಯಾಚರಣೆ ನಡೆಸುತ್ತಿರುವುದು ಕಂಡುಬಂದಿದ್ದು, ಪಿ.ಜಿ. ಉಪಹಾರ ಗೃಹದಲ್ಲಿ ಸ್ವಚ್ಚತೆ ಕಾಪಾಡದೇ ಇರುವುದರಿಂದ ನಿಯಮಾನುಸಾರ 50 ಸಾವಿರ ರೂ ದಂಡ ವಿಧಿಸಲಾಗಿದೆ. ಈ ತಪಾಸಣೆಯಲ್ಲಿ ವೈದ್ಯಾಧಿಕಾರಿ ಹಾಗೂ ಆರೋಗ್ಯ ಮೇಲ್ವಿಚಾರಕರು ಹಾಜರಿದ್ದರು ಎಂದು ಡಿ.ಎಸ್.ರಮೇಶ್ ಮಾಹಿತಿ ನೀಡಿದ್ದಾರೆ.














