ಬೆಂಗಳೂರು: ಭಗವದ್ಗೀತೆ ಸನಾತನ ಆಶಯವಾದ ಜ್ಞಾನ ಪರಂಪರೆಯ ಕೈಪಿಡಿಯಾಗಿದ್ದು, ಅದು ಆಧ್ಯಾತ್ಮ ಮತ್ತು ಭಕ್ತಿಯ ಸಮ್ಮಿಲನ ಕೂಡ ಆಗಿದೆ. ಇದನ್ನು ಇತ್ತೀಚೆಗೆ ಜಗತ್ತಿನ ಹಲವು ದೇಶಗಳ ಜನರು ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಉಲ್ಲೇಖನೀಯ ಸಂಗತಿಯಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಸಿ. ಆರ್ ಮುಕುಂದ್ ತಿಳಿಸಿದರು.
ಶುಕ್ರವಾರ ರಾತ್ರಿ ವಿವಿಪುರದ ವಾಸವಿ ಕನ್ವೆನ್ಷನ್ ಸೆಂಟರ್‌ನ ಸಭಾಂಗಣದಲ್ಲಿ ನಡೆಯುವ ಸ್ನೇಹ ಸೇವಾ ಟ್ರಸ್ಟ್ ವತಿಯಿಂದ ಅಂತರ ಪ್ರೌಢ ಶಾಲೆಗಳ ಭಗವದ್ಗೀತೆ ಸ್ಪರ್ಧೆ-2025ರ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಭಗವದ್ಗೀತೆಯನ್ನು ಕಂಠಸ್ಥ ಮಾಡಿಕೊಂಡರೆ, ಅದೇ ಅವರ ಜೀವನಕ್ಕೆ ಬೆಳಕಾಗಲಿದೆ ಜ್ಞಾನ, ವಿವೇಕ ಮತ್ತು ಜೀವನದ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಬೆಳೆಸಲು ಭವದ್ಗೀತೆಯ ಬೋಧನೆಗಳು ಅತ್ಯಂತ ಸಹಾಯಕವಾಗಿದ್ದು, ಶ್ರೀ ಕೃಷ್ಣನ ಬೋಧನೆಯ ಸಾರಾಂಶವನ್ನು ಗೀತೆ ಹೊಂದಿದ್ದು, ಮನಸ್ಸಿನ ಶಾಂತಿ ಮತ್ತು ಜ್ಞಾನದ ಸರಿಯಾದ ಅಳವಡಿಕೆಗೆ ಮಾರ್ಗದರ್ಶನ ನೀಡುತ್ತದೆ ಎಂದು ತಿಳಿಸಿದರು.
ಭಗವದ್ಗೀತೆಯ ಅರ್ಥ ನಾವು ಬೆಳೆದಂತೆ ಬೇರೆ-ಬೇರೆ ವಿಧದಲ್ಲಿ ಗೋಚರಿಸುತ್ತಾ ಹೋಗುತ್ತದೆ. ಪ್ರಮುಖ ವ್ಯಕ್ತಿಗಳು ಇದರ ಶಬ್ದಗಳನ್ನು ಮತ್ತು ವಾಕ್ಯಗಳನ್ನು ತೆಗೆದುಕೊಂಡು, ತಮ್ಮ ಜೀವನದ ಹಲವು ಸಮಸ್ಯೆಗಳನ್ನು ಪರಿಹರಿಸಿಕೊಂಡಿದ್ದಾರೆ. ಮತ್ತು ಜೀವನದ ಪಯಣಕ್ಕೆ ಹೊಸ ವ್ಯಾಖ್ಯಾನವನ್ನು ಕಂಡುಕೊಂಡಿದ್ದಾರೆ. ಇದನ್ನು ಅಳವಡಿಸಿಕೊಂಡು ಎಲ್ಲ ವಿದ್ಯಾರ್ಥಿಗಳು ಸಾಧನೆ ಮತ್ತು ಅಂತಿಮ ಗುರಿಯನ್ನು ಹೊಂದಲು ಕಡ್ಡಾಯವಾಗಿ ಅಳವಡಿಸಿಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಚಿನ್ಮಯ ಮಿಷನ್‌ನ ಸ್ವಾಮಿ ಆದಿತ್ಯಾನಂದಾಜಿ ಮಾತನಾಡಿ, ಭ ಗವಂತ ಹೂವಿನ ಹಾರದಲ್ಲಿರುವ ಸೂತ್ರದಂತೆ. ಕಾಣದಿದ್ದರೂ, ಅವನ ಹೊರತಾಗಿ ಅದರ ಅಸ್ತಿತ್ವವೇ ಇರುವುದಿಲ್ಲ. ನಮ್ಮ ಪರಂಪರೆಯಲ್ಲಿ ದೇವರು ಎನ್ನುವುದಕ್ಕೆ ಹಲವು ವ್ಯಾಖ್ಯಾನಗಳಿವೆ. ನಿತ್ಯ ಜೀವನದಲ್ಲಿ ನಾವು ಕಾಣುವ ಪ್ರತಿ ವಸ್ತು, ವ್ಯಕ್ತಿಗಳಲ್ಲಿ ಭಗವಂತನನ್ನು ಕಾಣಬೇಕೆಂಬುದು ಇಲ್ಲಿನ ಮಣ್ಣಿನ ಸಂಸ್ಕೃತಿಯ ಭಾಗವಾಗಿದ್ದು, ಇದನ್ನೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣ, ಅರ್ಜುನನ ಸಂಭಾಷಣೆಯ ರೂಪದಲ್ಲಿ ಹೇಳಲಾಗಿದೆ ಎಂದರು.
ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಲು ಮಾತನಾಡಿ, ಪ್ರಯಾಣಕ್ಕೆ ಜಿಪಿಎಸ್ ಇದ್ದಂತೆ, ನಮ್ಮ ಜೀವನದ ಸಂತುಷ್ಟ ಭಾವನಾತ್ಮಕ ಪಯಣಕ್ಕೆ ಭಗವದ್ಗೀತೆ ಪೂರಕವಾಗಿದೆ. 21ನೇ ಶತಮಾನದಲ್ಲಿ ಮಕ್ಕಳು, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳದೆ, ತಮ್ಮ ಜೀವನವನ್ನು ಇತರರೊಂದಿಗೆ ಹೋಲಿಸಿಕೊಂಡು, ಖಿನ್ನತೆಯಂತಹ ಸಮಸ್ಯೆಗಳಿಗೆ ಒಳಗಾಗುವುದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಅಂತರ ಪ್ರೌಢಶಾಲಾ ಭಗವದ್ಗೀತೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಿವಿ‘ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಸ್ಟ್ರೋ ಸೊಲ್ಯೂಷನ್ ಪ್ರೈ.ಲಿ. ನಿರ್ದೇಶಕಿ ಅರುಣಾ ಸುಂದರ್, ಜೈನ್ ವಿದ್ಯಾಲಯದ ಉಪಾಧ್ಯಕ್ಷ ಹೇಮರಾಜ್ ಜೈನ್, ಸ್ನೇಹ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎ. ಶ್ರೀನಿವಾಸ ಗುಪ್ತಾ ಸೇರಿದಂತೆ ಇತರರಿದ್ದರು.














